ಡ್ರಾ್ಯಗನ್ ರಾಷ್ಟ್ರ ಚೀನಾದ ಆರ್ಥಿಕತೆ ಕ್ರಮೇಣ ದುರ್ಬಲಗೊಳ್ಳುತ್ತಿದೆ. 2026ರ ಮೊದಲಾರ್ಧದಲ್ಲಿ ಗೃಹೋಪಯೋಗಿ ಕಾರುಗಳು ಮತ್ತು ಮನೆಗಳ ಮಾರಾಟದಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. ಇನ್ನೊಂದೆಡೆ, ಆಗಸ್ಟ್ ತಿಂಗಳಲ್ಲಿ ನಿರುದ್ಯೋಗ ಪ್ರಮಾಣವು ದಾಖಲೆಯ ಶೇಕಡ 18.9ಕ್ಕೆ ತಲುಪಿರುವುದು ಯುವಜನರಲ್ಲಿ ಕಳವಳ ಮೂಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಆರ್ಥಿಕತೆಗೆ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚಿನ ನೆರವಿನ ಅಗತ್ಯವಿರುವಾಗ, ಸರ್ಕಾರವು ಕೃತಕ ಬುದ್ಧಿಮತ್ತೆ (ಎಐ) ಯಂತಹ ಕ್ಷೇತ್ರಗಳಿಗೆ ಹೆಚ್ಚಿನ ಹಣವನ್ನು ಹೂಡಿಕೆ ಮಾಡುತ್ತಿದೆ ಎಂದು ಚೀನಾದ ಅನೇಕ ಅರ್ಥಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸಿದ್ದು, ಈ ಬೆಳವಣಿಗೆ ಕುರಿತಾದ ವಿವರ ಇಲ್ಲಿದೆ.
ಮಂದಗತಿಯ ಹೂಡಿಕೆ ಮತ್ತು ಖರೀದಿ ಪ್ರಮಾಣ ತೀವ್ರವಾಗಿ ಕುಸಿದ ಪರಿಣಾಮವಾಗಿ ಆಗಸ್ಟ್ನಲ್ಲಿ ಚೀನಾದ ಆರ್ಥಿಕತೆಯ ಮೇಲೆ ಮತ್ತಷ್ಟು ಒತ್ತಡ ಉಂಟಾಗಿದೆ. ಗ್ರಾಹಕರ ವೆಚ್ಚದ ಪ್ರಮುಖ ಮಾಪಕವಾಗಿರುವ ಚಿಲ್ಲರೆ ಮಾರಾಟವು, ಕಳೆದ ತಿಂಗಳು ವಾರ್ಷಿಕ ಆಧಾರದ ಮೇಲೆ ಶೇ.0.4ರಷ್ಟು ಮಾತ್ರ ಬೆಳವಣಿಗೆ ಕಂಡಿದೆ ಎಂದು ರಾಷ್ಟ್ರೀಯ ಅಂಕಿ-ಅಂಶಗಳ ಬ್ಯೂರೋ (ಎನ್ಬಿಎಸ್) ಬಿಡುಗಡೆ ಮಾಡಿದ ವರದಿ ತಿಳಿಸಿದೆ. ಚೀನಾದ ಹಣಕಾಸು ದತ್ತಾಂಶ ಪೂರೈಕೆದಾರ ಸಂಸ್ಥೆಯಾದ ‘ವಿಂಡ್’ ನಡೆಸಿದ ಸಮೀಕ್ಷೆಯಲ್ಲಿ ಅರ್ಥಶಾಸ್ತ್ರಜ್ಞರು ಊಹಿಸಿದ್ದ ಶೇ.0.73ರಷ್ಟು ಏರಿಕೆಗೆ ಹೋಲಿಸಿದರೆ ಈ ಅಂಕಿ-ಅಂಶವು ಕಡಿಮೆಯಾಗಿದೆ; ಅಲ್ಲದೆ ಜುಲೈ ತಿಂಗಳಲ್ಲಿ ದಾಖಲಾಗಿದ್ದ ಶೇ.0.6ರಷ್ಟು ಹೆಚ್ಚಳಕ್ಕಿಂತಲೂ ಕುಸಿದಿದೆ.
ಮೂಲಸೌಕರ್ಯ, ಉತ್ಪಾದನೆ ಮತ್ತು ನಿರ್ವಣದಂತಹ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡ ಒಟ್ಟಾರೆ ಸ್ಥಿರಾಸ್ತಿ ಹೂಡಿಕೆಯು 2026ರ ಜನವರಿ-ಆಗಸ್ಟ್ ಅವಧಿಯಲ್ಲಿ ವಾರ್ಷಿಕ ಆಧಾರದ ಮೇಲೆ ಶೇ.7.2ರಷ್ಟು ಇಳಿಕೆಯಾಗಿದೆ. ಅದರಲ್ಲ್ಲೂ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಗಣನೀಯವಾಗಿ ಕುಸಿದಿದ್ದು, ಉದ್ಯೋಗ ಸೃಷ್ಟಿಯ ಪ್ರಮಾಣವೂ ಇಳಿಕೆಯಾಗಿದೆ. ಇದರಿಂದ, ಚೀನಾದ ಆರ್ಥಿಕ ಹಿಂಜರಿತ ಇನ್ನಷ್ಟು ತೀವ್ರಗೊಂಡಿದೆ. ಆರ್ಥಿಕತೆಯ ಅಂಕಿ-ಅಂಶಗಳು ಬೀಜಿಂಗ್ ಮೇಲೆ ಒತ್ತಡ ಸೃಷ್ಟಿಸಿದ್ದು, 40 ಶತಕೋಟಿ ಮೌಲ್ಯದ ಆರ್ಥಿಕ ಪ್ಯಾಕೇಜ್ (ಉತ್ತೇಜಕ ಕ್ರಮ) ಘೊಷಿಸುವ ಸಾಧ್ಯತೆ ಇದೆ.
ಜುಲೈನಲ್ಲಿ ನಡೆದ ಪೊಲಿಟ್ಬ್ಯೂರೋ ಸಭೆಯ ನಂತರ, ಚೀನಾದ ನಾಯಕರು ಎಐ ಆಧಾರಿತ ಹೊಸ ಆರ್ಥಿಕತೆಯನ್ನು ಉತ್ತೇಜಿಸಲು ಒತ್ತು ನೀಡಿದರು. ಸರ್ಕಾರವು ಸೀಮಿತ ಆರ್ಥಿಕ ನೆರವನ್ನು ಮುಂದುವರಿಸಲು ಸಹ ನಿರ್ಧರಿಸಿತು. ಎಐ ಕ್ಷೇತ್ರದಲ್ಲಿ ಸರ್ಕಾರದ ಹೂಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಇದರಿಂದಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತು ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವ ಕ್ಷೇತ್ರಗಳಿಗೆ ಹಣದ ಕೊರತೆ ಎದುರಾಗಬಹುದು ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.
ಅವರ ಪ್ರಕಾರ, ಎಐ ಕಂಪನಿಗಳಿಗೆ ಸರ್ಕಾರದ ನೆರವು ಮಾತ್ರವಲ್ಲದೆ, ಅವುಗಳ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರು ಮತ್ತು ವ್ಯವಹಾರಗಳೂ (ಮಾರುಕಟ್ಟೆ ಬೇಡಿಕೆ) ಅಗತ್ಯವಾಗಿವೆ. ಬೀಜಿಂಗ್ನ ಪ್ರಮುಖ ಸಮಾಜಶಾಸ್ತ್ರಜ್ಞ ಸನ್ ಲಿಪಿಂಗ್ ಚೀನಾದ ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಸೋವಿಯತ್ ಒಕ್ಕೂಟಕ್ಕೆ ಹೋಲಿಸಿದ್ದಾರೆ. ಸೋವಿಯತ್ ಒಕ್ಕೂಟದ ಅತ್ಯಂತ ಬಲಿಷ್ಠ ಕಾಲಘಟ್ಟದಲ್ಲಿ ಅದರ ಆರ್ಥಿಕತೆಯು ಅಮೆರಿಕದ ಗಾತ್ರದ ಶೇಕಡ 70ರಷ್ಟಿತ್ತು. ವಿಜ್ಞಾನ ಮತ್ತು ತಂತ್ರಜ್ಞಾನದ ಕೆಲವು ಕ್ಷೇತ್ರಗಳಲ್ಲಿ ಅದು ಅಮೆರಿಕಕ್ಕಿಂತಲೂ ಮುಂದಿತ್ತು. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಹೊಂದಿದ್ದಾಗ್ಯೂ, ಸೋವಿಯತ್ ಒಕ್ಕೂಟದ ಆರ್ಥಿಕತೆಯು ಅಂತಿಮವಾಗಿ ದುರ್ಬಲಗೊಂಡಿತು. ಚೀನಾ ಇದೇ ದಾರಿಯಲ್ಲಿ ಸಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.
* ವಾರ್ಷಿಕ ಜಿಡಿಪಿ ಬೆಳವಣಿಗೆ ದರವು ಅಧಿಕೃತ ಗುರಿಗಳನ್ನು ತಲುಪಲು ವಿಫಲವಾಗಿ, ಎರಡನೇ ತ್ರೖೆಮಾಸಿಕದಲ್ಲಿ ಶೇಕಡ 4.3ಕ್ಕೆ ಕುಸಿದಿದೆ.
* ಆಗಸ್ಟ್ನಲ್ಲಿ ಚಿಲ್ಲರೆ ಮಾರಾಟವು ವಾರ್ಷಿಕ ಆಧಾರದ ಮೇಲೆ ಕೇವಲ ಶೇ.0.4ರಷ್ಟು ಅತ್ಯಲ್ಪ ಬೆಳವಣಿಗೆ ಕಂಡಿದ್ದು, ಇದು ಗ್ರಾಹಕರ ದುರ್ಬಲ ಬೇಡಿಕೆಯನ್ನು ಸೂಚಿಸುತ್ತದೆ.
* ರಿಯಲ್ ಎಸ್ಟೇಟ್ ಮೇಲಿನ ಹೂಡಿಕೆಯು 2026ರ ಮೊದಲ ಎಂಟು ತಿಂಗಳುಗಳಲ್ಲಿ ಶೇ.19.9ರಷ್ಟು ತೀವ್ರ ಕುಸಿತ ಕಂಡಿದ್ದು, ಮನೆಗಳ ಬೆಲೆಗಳು ನಿರಂತರವಾಗಿ ಇಳಿಕೆಯಾಗುತ್ತಿವೆ.
* ಕುಟುಂಬಗಳು ಮತ್ತು ವ್ಯಾಪಾರ ಸಂಸ್ಥೆಗಳು ಸಾಲ ಪಡೆಯುವ ಪ್ರಮಾಣ ಕುಸಿದ ಪರಿಣಾಮ, ಆಗಸ್ಟ್ನಲ್ಲಿ ಬ್ಯಾಂಕ್ ಸಾಲಗಳ ಬೆಳವಣಿಗೆಯು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ.
* ಸೆಮಿಕಂಡಕ್ಟರ್ ರಫ್ತು ಮತ್ತು ಕೃತಕ ಬುದ್ಧಿಮತ್ತೆ (ಎಐ) ಮೂಲಸೌಕರ್ಯಗಳು ಗಣನೀಯ ಏರಿಕೆ ಕಾಣುತ್ತಿದ್ದು, ಆಗಸ್ಟ್ನಲ್ಲಿ ಕೈಗಾರಿಕಾ ಉತ್ಪಾದನೆಯನ್ನು ಶೇ.5.2ರಷ್ಟು ಹೆಚ್ಚಿಸಿವೆ.
* ಸಾಂಪ್ರದಾಯಿಕ ಕ್ಷೇತ್ರಗಳಾದ ಸಣ್ಣ ವ್ಯಾಪಾರಗಳು ಮತ್ತು ಕಾರ್ವಿುಕ ಮಾರುಕಟ್ಟೆ ತತ್ತರಿಸಿದ್ದು, ತಂತ್ರಜ್ಞಾನ ಆಧಾರಿತ ರಫ್ತು ಬೆಳವಣಿಗೆಯ ಓಟದಲ್ಲಿ ಹಿಂದೆ ಬಿದ್ದಿವೆ.
ಸ್ಟಾ್ಯನ್ಫೋರ್ಡ್ನ ಎಐ ಇಂಡೆಕ್ಸ್ ವರದಿಯ ಪ್ರಕಾರ, 2000ರಿಂದ 2023ರ ನಡುವೆ ಸರ್ಕಾರದ ಉಪಕ್ರಮದಡಿಯಲ್ಲಿ ರಚಿಸಲಾದ ಹೂಡಿಕೆ ನಿಧಿಗಳು ಎಐ ಕಂಪನಿಗಳಲ್ಲಿ 15 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿವೆ. ಈಗ ಚೀನಾ ಎಐಗೆ ಅಗತ್ಯವಿರುವ ಡೇಟಾ ಸೆಂಟರ್ಗಳನ್ನು ಕೂಡ ವೇಗವಾಗಿ ನಿರ್ವಿುಸುತ್ತಿದೆ. ಬ್ಲೂಮ್ಗ್ ಪ್ರಕಾರ, ಮುಂದಿನ 5 ವರ್ಷಗಳಲ್ಲಿ ದೇಶಾದ್ಯಂತ ಡೇಟಾ ಸೆಂಟರ್ಗಳನ್ನು ನಿರ್ವಿುಸಲು ಚೀನಾ 28 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸಿದ್ಧತೆ ನಡೆಸಿದೆ. ಈ ಡೇಟಾ ಸೆಂಟರ್ಗಳನ್ನು ಸರ್ಕಾರಿ ಸ್ವಾಮ್ಯದ ಕಂಪನಿಗಳೇ ನಿರ್ವಹಿಸಲಿವೆ.
ಚೀನಾದ ಕೆಲ ಇಂಟರ್ನೆಟ್ ಬಳಕೆದಾರರು ಸರ್ಕಾರದ ಬೃಹತ್ ಎಐ ಅಭಿಯಾನವನ್ನು ‘ಎಐ ಗ್ರೇಟ್ ಲೀಪ್ ಫಾರ್ವರ್ಡ್’ ಎಂದು ಕರೆಯುತ್ತಿದ್ದಾರೆ. ಈ ಹೆಸರನ್ನು ಚೀನಾದ ಮಾಜಿ ನಾಯಕ ಮಾವೋ ಝೆಡಾಂಗ್ ಅವರ ‘ಗ್ರೇಟ್ ಲೀಪ್ ಫಾರ್ವರ್ಡ್’ ಅಭಿಯಾನದಿಂದ ತೆಗೆದುಕೊಳ್ಳಲಾಗಿದೆ. ಮಾವೋ 1958ರಲ್ಲಿ ಚೀನಾವನ್ನು ವೇಗವಾಗಿ ಕೈಗಾರಿಕೀಕರಣಗೊಳಿಸಲು ಮತ್ತು ಬಲಿಷ್ಠಗೊಳಿಸಲು ಕೈಗಾರಿಕೆ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಬೃಹತ್ ಪ್ರಮಾಣದ ಬದಲಾವಣೆಗಳನ್ನು ಜಾರಿಗೆ ತಂದಿದ್ದರು.
ಆದರೆ ಆ ಅಭಿಯಾನವು ಹೀನಾಯವಾಗಿ ವಿಫಲಗೊಂಡು, ದೇಶದಲ್ಲಿ ಭೀಕರ ಬರಗಾಲಕ್ಕೆ ಕಾರಣವಾಯಿತು. ಇಂದು ಕೂಡ ಚೀನಾ ಸರ್ಕಾರವು ಎಐ ಕ್ಷೇತ್ರವನ್ನು ಶರವೇಗದಲ್ಲಿ ಮುನ್ನಡೆಸಲು ಅಪಾರ ಪ್ರಮಾಣದ ಹಣವನ್ನು ಹೂಡಿಕೆ ಮಾಡುತ್ತಿದೆ. ಹಾಗಾಗಿ ಕೆಲವರು ಇದನ್ನು ಅಂದಿನ ಹಳೆಯ ಅಭಿಯಾನಕ್ಕೆ ಹೋಲಿಸಿದ್ದಾರೆ. ದೇಶದ ಆರ್ಥಿಕತೆ ಮಂದಗತಿಯಲ್ಲಿದ್ದು, ಯುವಜನರಿಗೆ ಉದ್ಯೋಗಗಳು ಸಿಗದ ಈ ಸಂದರ್ಭದಲ್ಲಿ, ಸರ್ಕಾರವು ಎಐಗಾಗಿ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಏಕೆ ವ್ಯಯಿಸುತ್ತಿದೆ ಎಂಬುದು ಈಗ ಮೂಡಿರುವ ಪ್ರಶ್ನೆಯಾಗಿದೆ.
ಚೀನಾದ ಮಾಜಿ ಕೇಂದ್ರೀಯ ಬ್ಯಾಂಕ್ ಸಲಹೆಗಾರ ಲೀ ದಾವೊಕುಯಿ, ‘ದೇಶದ ಆರ್ಥಿಕತೆಯು ಅಗತ್ಯಕ್ಕಿಂತ ಹೆಚ್ಚು ನಿಧಾನಗತಿಯಲ್ಲಿ ಸಾಗುತ್ತಿದೆ’ ಎಂದು ಜುಲೈನಲ್ಲಿ ಹೇಳಿದರು. ಮತ್ತೊಬ್ಬ ಮಾಜಿ ಸಲಹೆಗಾರ ಲಿಯು ಶಿಜಿನ್ ಅವರು ಗ್ರಾಮೀಣ ಜನರ ಪಿಂಚಣಿಯನ್ನು ಹೆಚ್ಚಿಸುವಂತೆ ಸಲಹೆ ನೀಡಿದರು. ಪಿಂಚಣಿಯನ್ನುರೂ 2,800ರಿಂದ ತಿಂಗಳಿಗೆ ರೂ 14,000ಕ್ಕೆ ಹೆಚ್ಚಿಸುವ ಬಗ್ಗೆ ಪ್ರಸ್ತಾಪಿಸಿದರು. ತಂತ್ರಜ್ಞಾನದಲ್ಲಿ ಮುನ್ನಡೆಯುವ ಮೊದಲು ದೇಶದಲ್ಲಿ ಹಣದುಬ್ಬರ ಇಳಿಕೆಯಾಗುವುದು ಮತ್ತು ಕಂಪನಿಗಳ ಆದಾಯ ಹೆಚ್ಚುವುದು ಅಗತ್ಯವಾಗಿದೆ ಎಂದು ಕೇಂದ್ರೀಯ ಬ್ಯಾಂಕ್ನ ಸಲಹೆಗಾರ ಹುವಾಂಗ್ ಹೈಜೌ ಹೇಳಿದರು. ಚೀನಾದ ದೀರ್ಘಾವಧಿಯ ಚೇತರಿಕೆಯು, ದೇಶವು ಹೂಡಿಕೆ ಮತ್ತು ರಫ್ತು-ಅವಲಂಬಿತ ಮಾದರಿಯಿಂದ ಸುಸ್ಥಿರ, ಗ್ರಾಹಕ-ಬಳಕೆ ಆಧಾರಿತ ಬೆಳವಣಿಗೆಯತ್ತ ಯಶಸ್ವಿಯಾಗಿ ಬದಲಾಗಬಲ್ಲದೇ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಹೊಸ ಪದವೀಧರರು ದಾಖಲೆ ಪ್ರಮಾಣದಲ್ಲಿ ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸಿದ ಕಾರಣ ಮತ್ತು ಕಿರಿಯ ಉದ್ಯೋಗಿಗಳಿಗೆ ನೀಡಲಾಗುತ್ತಿದ್ದ ಕೆಲಸಗಳಲ್ಲಿ ಕಂಪನಿಗಳು ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಹೆಚ್ಚಿಸಿದ್ದರಿಂದ, ಚೀನಾದ ‘ನಗರ ಯುವ ನಿರುದ್ಯೋಗ ದರ’ವು ಜುಲೈನಲ್ಲಿ 11 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ವಿದ್ಯಾರ್ಥಿಗಳನ್ನು ಹೊರತುಪಡಿಸಿ, 16ರಿಂದ 24 ವರ್ಷ ವಯಸ್ಸಿನ ನಗರ ಯುವ ಕಾರ್ವಿುಕರ ನಿರುದ್ಯೋಗ ದರವು ಜೂನ್ನಲ್ಲಿದ್ದ ಶೇಕಡ 14.9ರಿಂದ 17.9ಕ್ಕೆ ಏರಿಕೆಯಾಗಿದೆ. 25ರಿಂದ 29 ವರ್ಷ ವಯಸ್ಸಿನವರ ನಿರುದ್ಯೋಗ ದರವು ಶೇ.7.1ರಿಂದ 7.2ಕ್ಕೆ ಹೆಚ್ಚಾಗಿದೆ. ಶಿಕ್ಷಣ ಸಚಿವಾಲಯದ ಪ್ರಕಾರ, ಚೀನಾದಲ್ಲಿ 2026ರಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸಿದ ಪದವೀಧರರ ಸಂಖ್ಯೆ ಒಟ್ಟು 1.27 ಕೋಟಿ (12.7 ಮಿಲಿಯನ್) ತಲುಪುವ ನಿರೀಕ್ಷೆಯಿದೆ. ಇದು 2025ಕ್ಕಿಂತ 4.80 ಲಕ್ಷ ಹೆಚ್ಚಾಗಿದ್ದು, ಇದುವರೆಗಿನ ದಾಖಲೆಯ ಗರಿಷ್ಠ ಪ್ರಮಾಣವಾಗಿದೆ. ಆದರೆ, ಚೀನೀ ಸಂಸ್ಥೆಗಳು ಹೊಸ ಪದವೀಧರರ ನೇಮಕಾತಿಯನ್ನು ತಗ್ಗಿಸಿವೆ ಅಥವಾ ಎಐ ಪರಿಕರಗಳನ್ನು ಪರಿಚಯಿಸಿದ ನಂತರ ಖಾಲಿಯಾದ ಹುದ್ದೆಗಳಿಗೆ ಹೊಸಬರನ್ನು ನೇಮಿಸದೆ ಹಾಗೆಯೇ ಬಿಡುತ್ತಿವೆ.