ನ್ಯೂಸ್

ಚೀನಾದ ಶ್ರೀಮಂತರಿಗೆ ಜಿನ್​ಪಿಂಗ್ ಶಾಕ್: ಮಧ್ಯಮ ವರ್ಗದವರ ಆದಾಯ ಏರಿಕೆ

ಬೀಜಿಂಗ್: ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಸಮಾನ ಸಮೃದ್ಧಿ ನೀತಿ ಪ್ರಸ್ತಾಪಿಸಿರುವುದರಿಂದ ದೇಶದ ಶ್ರೀಮಂತರಿಗೆ ಆದಾಯ ಖೋತಾ ಆಗುವ ಭೀತಿ ಎದುರಾಗಿದೆ. ಆದಾಯ ನಿಯಂತ್ರಣ ಮತ್ತು ಮರುಹಂಚಿಕೆಯ ಸೂತ್ರವನ್ನು ಹೊಸ ನೀತಿ ಒಳಗೊಂಡಿರುವುದು ಶ್ರೀಮಂತರ ಆತಂಕವನ್ನು ಹೆಚ್ಚಿಸಿದೆ. ಜಿನ್​ಪಿಂಗ್ 2012ರಲ್ಲಿ ಅಧಿಕಾರಕ್ಕೆ ಬಂದಾಗಲೇ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ (ಸಿಪಿಸಿ), ಬಡತನ ದೂರಮಾಡುವ ಮತ್ತು ಅತಿರೇಕವಿಲ್ಲದ ಸಮೃದ್ಧ ಸಮಾಜ ನಿರ್ಮಾಣ ಮಾಡುವ ಭರವಸೆಯನ್ನು ನೀಡಿತ್ತು. ಈ ನಿಟ್ಟಿನಲ್ಲಿ ಮಂಗಳವಾರ ನಡೆದ ಸಿಪಿಸಿಯ ಹಣಕಾಸು ಮತ್ತು ಆರ್ಥಿಕ ವ್ಯವಹಾರ ಕುರಿತ ಕೇಂದ್ರೀಯ ಸಮಿತಿಯು ಅತಿ ಶ್ರೀಮಂತರನ್ನು ಗುರಿಯಾಗಿಟ್ಟುಕೊಂಡು ಕಾನೂನು ಬದ್ಧ ಆದಾಯದ ರಕ್ಷಣೆ, ಹೆಚ್ಚುವರಿ ಆದಾಯವನ್ನು ಸಮಂಜಸವಾಗಿ ಹೊಂದಾಣಿಕೆ ಹಾಗೂ ಅಧಿಕ ಆದಾಯದ ಧನಿಕರು ಮತ್ತು ಉದ್ದಿಮೆಗಳು ಸಮಾಜಕ್ಕೆ ಹೆಚ್ಚು ಕೊಡುಗೆ ನೀಡಬೇಕು ಎಂಬ ಠರಾವನ್ನು ಅಂಗೀಕರಿಸಿದೆ.

ದೇಶದ ಶ್ರೀಮಂತರ ಪೈಕಿ ಶೇ. 20ರಷ್ಟು ಜನರು ಬಡವರಲ್ಲಿ ಶೇ. 20 ಮಂದಿಯ ಆದಾಯಕ್ಕಿಂತ ಹತ್ತುಪಟ್ಟನ್ನು ಗಳಿಸುತ್ತಾರೆ. ಬಡತನವನ್ನು ದೂರಮಾಡಲು ಸರ್ಕಾರ ಅನೇಕ ಉಪಕ್ರಮಗಳನ್ನು ಕೈಗೊಂಡರೂ ಈ ಸರಾಸರಿಯಲ್ಲಿ 2015 ರಿಂದ ಯಾವುದೇ ಬದಲಾವಣೆ ಆಗಿಲ್ಲ ಎಂಬ ಅಂಕಿ-ಅಂಶವನ್ನು ಆಧರಿಸಿ ಈ ಸಮಿತಿಯು ಈ ನಿರ್ಧಾರ ಕೈಗೊಂಡಿದೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ವರದಿ ಮಾಡಿದೆ.

ಅಲಿಬಾಬಾ ಗ್ರೂಪ್ ಗುರಿ?

ಹೊಸ ನೀತಿಯ ಪ್ರಾಯೋಗಿಕ ಯೋಜನೆ ಅನುಷ್ಠಾನಕ್ಕೆ ಝೆಜಿಯಾಂಗ್ ಪ್ರಾಂತ್ಯವನ್ನು ಸರ್ಕಾರ ಆಯ್ಕೆ ಮಾಡಿ ಕೊಂಡಿದೆ ಎನ್ನಲಾಗಿದೆ. ಈ ಪ್ರಾಂತ್ಯದಲ್ಲೇ ಅಲಿಬಾಬಾ ಸಮೂಹದ ಕೇಂದ್ರ ಕಚೇರಿ ಇದೆ. ಹೀಗಾಗಿ ಸರ್ಕಾರದ ಮೊದಲ ಗುರಿ ಅಲಿಬಾಬಾ ಸಮೂಹ ಎಂಬುದು ಸ್ಪಷ್ಟವಾಗಿದೆ.

ಮಧ್ಯಮ ವರ್ಗದವರ ಆದಾಯ ಏರಿಕೆ

ಮಧ್ಯಮ ವರ್ಗದವರ ಮತ್ತು ಕಡಿಮೆ ಆದಾಯದ ಗುಂಪಿನವರ ಆದಾಯ ಹೆಚ್ಚಿಸಲು ಸರ್ಕಾರ ಕ್ರಮಕೈಗೊಳ್ಳಲಿದೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಉತ್ತೇಜಿಸಲು ಅಕ್ರಮ ಆದಾಯಕ್ಕೆ ಕಡಿವಾಣ ಹಾಕುವ ಕ್ರಮಗಳು ಇದರಲ್ಲಿವೆ. ವಿದ್ಯಾರ್ಹತೆ ಹೆಚ್ಚಳ, ಗೃಹದ ಅಗತ್ಯಗಳ ಪೂರೈಕೆ, ಹಿರಿಯ ಯೋಗಕ್ಷೇಮ, ವೈದ್ಯಕೀಯ ವ್ಯವಸ್ಥೆಯಲ್ಲೂ ಸಮಾನತೆ ಉಂಟುಮಾಡುವ ಅವಕಾಶಗಳನ್ನು ಒದಗಿಸುವುದು. ಸಾರ್ವಜನಿಕ ಸೇವೆಯಲ್ಲಿ ಸಮಾನ ಅವಕಾಶ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಈ ಗುರಿಯನ್ನು ಸಾಧಿಸಬೇಕಿದ್ದರೆ ಹಣಕಾಸು ಸವಾಲುಗಳನ್ನು ಹಿಮ್ಮೆಟ್ಟಿಸುವುದು, ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ಅಗತ್ಯ ಸಮತೋಲನ ಕಾಯ್ದುಕೊಳ್ಳುವಿಕೆಯನ್ನು ಅಗತ್ಯವಾಗಿ ಮಾಡಬೇಕಿದೆ ಸಿಪಿಸಿಯ ಸಮಿತಿ ಹೇಳಿದೆ.