ನ್ಯೂಸ್

ತೈವಾನ್ ಮೇಲೆ ದಾಳಿಗೆ ಚೀನಾ ಪ್ಲ್ಯಾನ್?; ಉನ್ನತ ಅಧಿಕಾರಿಗಳ ಆಡಿಯೋ ಕ್ಲಿಪ್ ಸೋರಿಕೆ

Webdesk - Ravikanth
ಯೂಕ್ರೇನ್ ಮೇಲೆ ರಷ್ಯಾ ದಾಳಿಗೈದ ಮಾದರಿಯಲ್ಲೇ, ತೈವಾನ್ ಮೇಲೆ ದಾಳಿ ನಡೆಸುವುದಕ್ಕೆ ಚೀನಾ ಸಿದ್ಧತೆ ನಡೆಸಿದೆ ಎಂಬ ಮಾಹಿತಿ ಇರುವ ಆಡಿಯೋ ಕ್ಲಿಪ್ ಬಹಿರಂಗವಾಗಿದೆ. ಚೀನಾದ ಉನ್ನತಾಧಿಕಾರಿಗಳ ಸಂಭಾಷಣೆ ಈ ಆಡಿಯೋ ಕ್ಲಿಪ್​ನಲ್ಲಿದೆ. ತೈವಾನ್ ಮೇಲೆ ಏರಿಹೋದರೆ ಹುಷಾರ್ ಎಂದು ಅಮೆರಿಕವು ಚೀನಾಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ.

ಯೂಕ್ರೇನ್- ರಷ್ಯಾ ಬಿಕ್ಕಟ್ಟು ಚಾಲ್ತಿಯಲ್ಲಿರುವಂತೆಯೇ, ಅಮೆರಿಕದ ಪ್ರಭಾವದ ಕಾರಣದಿಂದಾಗಿ ಚೀನಾ-ತೈವಾನ್ ಸಂಬಂಧ ಇನ್ನಷ್ಟು ಹದಗೆಟ್ಟಿದೆ. ಟೋಕಿಯೋದಲ್ಲಿ ಕ್ವಾಡ್ ಶೃಂಗ ಆರಂಭಕ್ಕೆ ಮುನ್ನ ಚೀನಾದ ಮಾನವ ಹಕ್ಕುಗಳ ಕಾರ್ಯಕರ್ತೆ ಜೆನ್ನಿಫರ್ ಝೆಂಗ್, ಚೀನಾದ ಉನ್ನತಾಧಿಕಾರಿಗಳ ಮಾತುಕತೆಯ ಆಡಿಯೋ ಕ್ಲಿಪ್ ಅನ್ನು ಟ್ವೀಟ್ ಮಾಡಿ ಜಗತ್ತಿನ ಗಮನಸೆಳೆದಿದ್ದಾರೆ. 57 ನಿಮಿಷದ ಈ ಆಡಿಯೋ ಕ್ಲಿಪ್ ಅನ್ನು ಲ್ಯೂಡ್ ಮೀಡಿಯಾ ಯೂಟ್ಯೂಬ್ ಮೊದಲು ಬಹಿರಂಗ ಗೊಳಿಸಿತ್ತು. ಇದರಲ್ಲಿ ತೈವಾನ್ ಮೇಲೆ ದಾಳಿ ನಡೆಸುವುದಕ್ಕೆ ಸಿದ್ಧತೆ ನಡೆಸುತ್ತಿರುವ ಅಂಶ ಬಹಿರಂಗವಾಗಿದೆ. ತೈವಾನ್ ಮೇಲೆ ಹೇಗೆ ದಾಳಿ ನಡೆಸಬೇಕು ಮತ್ತು ಅದನ್ನು ಹೇಗೆ ಮುಂದುವರಿಸಬೇಕು ಎಂಬ ಯುದ್ಧ ಕಾರ್ಯತಂತ್ರದ ವಿಚಾರ ಆಡಿಯೋ ಕ್ಲಿಪ್​ನಲ್ಲಿದೆ.

ಯಾರ ನಡುವೆ ಮಾತುಕತೆ?: ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನಾದ ಉನ್ನತಾಧಿಕಾರಿ ಮತ್ತು ಪೀಪಲ್ಸ್ ಲಿಬರೇಷನ್ ಆರ್ವಿುಯ ಉನ್ನತಾಧಿಕಾರಿ ನಡುವಿನ ಮಾತುಕತೆ ಆಡಿಯೋ ಕ್ಲಿಪ್​ನಲ್ಲಿದೆ. ಮೇ 14ರಂದು ತೈವಾನ್ ದಾಳಿ ಕಾರ್ಯತಂತ್ರದ ಕುರಿತು ಸರ್ಕಾರದ ಉನ್ನತಾಧಿಕಾರಿಗಳ ಮಟ್ಟದಲ್ಲಿ ಸಭೆ ನಡೆದಿತ್ತು. ಇದಾದ ಬಳಿಕ ಈ ಸಂಭಾಷಣೆ ನಡೆದಿತ್ತು. ತೈವಾನ್ ಕುರಿತು ಅಧ್ಯಕ್ಷ ಷಿ ಜಿನ್​ಪಿಂಗ್ ಧೋರಣೆ ಮತ್ತು ಕಾರ್ಯತಂತ್ರವನ್ನು ಬಹಿರಂಗಗೊಳಿಸುವ ಉದ್ದೇಶದಿಂದಲೇ ಕಮ್ಯೂನಿಸ್ಟ್ ಪಾರ್ಟಿ ಉನ್ನತಾಧಿಕಾರಿ ಈ ಮಾತುಕತೆ ನಡೆಸಿದ್ದು, ಆಡಿಯೋ ಕ್ಲಿಪ್ ಸೋರಿಕೆಯಲ್ಲಿ ವೇದ್ಯವಾಗಿದೆ.

ಅಪಾಯದ ಜತೆಗೆ ಆಟ ಬೇಡ: ತೈವಾನ್ ಮೇಲೆ ಬಲವಂತದ ಹಿಡಿತ ಸಾಧಿಸಲು ಚೀನಾ ಪ್ರಯತ್ನಿಸುತ್ತಿದೆ. ಇದು ಅಪಾಯದ ಜತೆಗಿನ ಆಟವಾಗಿದ್ದು, ಇದು ಬೇಡ. ‘ಒಂದು ಚೀನಾ’ ನೀತಿಯನ್ನು ನಾವು ಒಪ್ಪಿಕೊಂಡಿದ್ದೇವೆ. ಬಲವಂತವಾಗಿ ಅದನ್ನು ಈಡೇರಿಸುವುದು ಸರಿಯಾದ ಕ್ರಮವಲ್ಲ. ಯೂಕ್ರೇನ್ ಮಾದರಿ ಅನುಕರಣೆ ಈ ಪ್ರಾಂತ್ಯದಲ್ಲಿ ಸಲ್ಲದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಚೀನಾಕ್ಕೆ ಎಚ್ಚರಿಕೆ ನೀಡಿದ್ದಾರೆ.

ಚೀನಾವನ್ನು ಕಡಿಮೆ ಅಂದಾಜಿಸಬೇಡಿ: ಚೀನಾ ಖಚಿತ ನಿಲುವು ಮತ್ತು ಸಾಮರ್ಥ್ಯವನ್ನು ಯಾರೂ ಕಡಿಮೆ ಅಂದಾಜಿಸಬೇಡಿ. ದೇಶದ ಸಾರ್ವಭೌಮತೆ ಮತ್ತು ಭೌಗೋಳಿಕ ಏಕತೆಯನ್ನು ಕಾಪಾಡಲು ಎಲ್ಲ ರೀತಿಯಲ್ಲೂ ಚೀನಾ ಸಮರ್ಥವಾಗಿದೆ ಎಂಬುದನ್ನು ಯಾರೂ ಮರೆಯಬಾರದು ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್​ಬಿನ್ ಸೋಮವಾರ ಎಚ್ಚರಿಸಿದ್ದಾರೆ.

ಸಭೆಯ ಶಿಫಾರಸುಗಳೇನು?

  • ಸಿವಿಲಿಯನ್ ಮತ್ತು ಮಿಲಿಟರಿ ಕಮಾಂಡ್ ಜತೆಯಾಗಿ ಕಾರ್ಯಾಚರಣೆ ಆರಂಭಿಸುವುದು, ಪ್ರಾಂತ್ಯದಲ್ಲಿ ಯೋಜನೆ- ನಿಯೋಜನೆ- ಸಂಘಟಿಸುತ್ತ ನಿಧಾನವಾಗಿ ಯುದ್ಧವನ್ನಾಗಿ ಪರಿವರ್ತಿಸುವುದು.
  • ಶಸ್ತ್ರಾಸ್ತ್ರ ಮತ್ತು ಯುದ್ಧೋಪಕರಣಗಳ ಉತ್ಪಾದನೆ ಮತ್ತು ದಾಸ್ತಾನು ಹೆಚ್ಚಿಸುವುದು. ವಿಶೇಷವಾಗಿ ಡ್ರೋನ್ ಮತ್ತು ಬೋಟ್​ಗಳ ಸಂಖ್ಯೆ ಹೆಚ್ಚಿಸಬೇಕು. ಇದಕ್ಕಾಗಿ ಝುುಹೈ ಆರ್ಬಿಟಾ, ಶೆನ್​ರೆೆನ್ ಏರೋಸ್ಪೇಸ್ ಡಾಂಗ್​ಫಾಂಗ್​ಹಾಂಗ್ ಸ್ಯಾಟಲೈಟ್ ಕಂಪನಿ, ಫೋಶಾನ್ ಡೆಲಿಯಾ ಮತ್ತು ಜಿ ಹುವಾ ಲ್ಯಾಬ್​ಗಳಲ್ಲಿ ಕಾರ್ಯ ಚುರುಕುಗೊಳಿಸಬೇಕು.

ಚೀನಾ ದಾಳಿ ನಡೆಸಿದರೆ ತೈವಾನ್​ಗೆ ಅಮೆರಿಕ ಸೇನೆ: ಚೀನಾದ ಉನ್ನತಾಧಿಕಾರಿಗಳ ನಡುವಿನ ಮಾತುಕತೆಯ ಆಡಿಯೋ ಬಹಿರಂಗವಾದ ಕಾರಣ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೋಮವಾರ ಪ್ರತಿಕ್ರಿಯಿಸಿದ್ದು, ಒಂದೊಮ್ಮೆ ಚೀನಾ ಸೇನೆ ತೈವಾನ್ ಮೇಲೆ ಸೇನಾ ಕಾರ್ಯಾಚರಣೆ ನಡೆಸಿದರೆ, ಅದನ್ನು ತಡೆಯಲು ಸೇನೆ ನಿಯೋಜಿಸಲು ಅಮೆರಿಕ ಸಿದ್ಧವಿದೆ ಎಂದು ಎಚ್ಚರಿಸಿದ್ದಾರೆ.

ಪರ್ಲ್ ರಿವರ್ ಡೆಲ್ಟಾ ಪ್ರದೇಶದ ಸುರಕ್ಷತೆ: ಆಡಿಯೋ ಕ್ಲಿಪ್​ನಲ್ಲಿರುವ ಅಧಿಕಾರಿಯ ಮಾತಿನ ಪ್ರಕಾರ, ಪರ್ಲ್ ರಿವರ್ ಡೆಲ್ಟಾ ಪ್ರದೇಶ (ಗುವಾಂಗ್​ರೆೋವು, ಶೆನ್​ರೆೆನ್, ಝುುಹೈ, ಫೋಶಾನ್, ಡಾನ್​ಗುವಾನ್, ಝೋಂಗ್​ಶಾನ್, ಹಾಂಕಾಂಗ್, ಮಕಾವು ಮತ್ತಿತರ)ಗಳ ಸುರಕ್ಷತೆ ನಿರ್ವಹಣೆಗೆ ಆದ್ಯತೆ ನೀಡುವ ವಿಚಾರ ಸಭೆಯಲ್ಲಿ ಮಹತ್ವ ಪಡೆದುಕೊಂಡಿತ್ತು. ಈ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಕೈಗಾರಿಕಾ ಘಟಕಗಳೂ ಹೆಚ್ಚಿವೆ ಎಂಬುದೇ ಇದಕ್ಕೆ ಕಾರಣ.

ಯುದ್ಧ ಸನ್ನದ್ಧತೆಗೆ ಸೂಚನೆ: ಗುವಾಂಗ್​ಡಾಂಗ್ ಪ್ರಾಂತ್ಯಕ್ಕೆ ಸೇನಾ ನಿಯೋಜನೆ ಮತ್ತು ಯುದ್ಧೋಪಕರಣ ಪೂರೈಕೆಯ ಹೊಣೆ ಪೂರ್ವ ಮತ್ತು ದಕ್ಷಿಣ ಸಮರ ವಲಯಗಳದ್ದು. ಇಲ್ಲಿ ಒಟ್ಟು 20 ಕೆಟಗರಿಗಳು, 239 ಉಪಕರಣಗಳ ಪೂರೈಕೆ ಹೊಣೆಗಾರಿಕೆ ಇದೆ. ಇದರಲ್ಲಿ 1.4 ಲಕ್ಷ ಯೋಧರು, 953 ನೌಕೆಗಳು, 1,653 ಡ್ರೋನ್​ಗಳು, 20 ಏರ್​ಪೋರ್ಟ್ ಮತ್ತು ಡಾಕ್ಸ್, ಹಡಗು ದುರಸ್ತಿ ಮತ್ತು ನಿರ್ವಣಕ್ಕೆ ಆರು ಯಾರ್ಡ್​ಗಳು, 14 ತುರ್ತು ವರ್ಗಾವಣೆ ಕೇಂದ್ರಗಳು, ಧಾನ್ಯ ಘಟಕ, ಆಸ್ಪತ್ರೆ, ರಕ್ತನಿಧಿ, ತೈಲ ಕೇಂದ್ರ, ಅನಿಲ ಕೇಂದ್ರ ಮುಂತಾದವುಗಳನ್ನು ಸಜ್ಜಾಗಿರಿಸುವುಕ್ಕೆ ಸಭೆ ಶಿಫಾರಸು ಮಾಡಿದೆ.

ಮೇ 14ರ ಸಭೆಯಲ್ಲಿ ಯಾರಿದ್ದರು?: ತೈವಾನ್ ದಾಳಿ ಕಾರ್ಯತಂತ್ರ ಕುರಿತ ಉನ್ನತಾಧಿಕಾರಿಗಳ ಸಭೆಯಲ್ಲಿ ಗುವಾಂಗ್​ಡಾಂಗ್ ಪ್ರಾಂತ್ಯದ ಪಾರ್ಟಿ ಸೆಕ್ರೆಟರಿ, ಡೆಪ್ಯುಟಿ ಸೆಕ್ರೆಟರಿ, ಗವರ್ನರ್, ವೈಸ್ ಗವರ್ನರ್, ಪೀಪಲ್ಸ್ ಲಿಬರೇಷನ್ ಆರ್ವಿುಯ ಮೇಜರ್ ಜನರಲ್ ಝೊವು ಹೇ, ಕಮಾಂಡರ್ ಆಫ್ ಗುವಾಂಗ್​ಡಾಂಗ್ ಮಿಲಿಟರಿ ರೀಜನ್​ನ ಕಮಾಂಡರ್, ಗುವಾಂಗ್​ಡಾಂಗ್ ಪ್ರಾವಿನ್ಶಿಯಲ್ ಕಮಿಟಿಯ ಸದಸ್ಯ ವಾಂಘ್ ಶೊವುಕ್ಸಿನ್ ಮುಂತಾದವರು ಭಾಗವಹಿಸಿದ ಪ್ರಮುಖರು. ತೈವಾನ್ ಸ್ವಾತಂತ್ರ್ಯ ಹೋರಾಟದ ಶಕ್ತಿಗಳನ್ನು ಸಂಪೂರ್ಣ ನಾಶಮಾಡುವುದು, ಅಗತ್ಯವೆನಿಸಿದರೆ ಯುದ್ಧ ಆರಂಭಿಸುವುದರ ವಿಚಾರವೇ ಸಭೆಯ ಕಾರ್ಯಸೂಚಿಯಾಗಿತ್ತು. ಅಧ್ಯಕ್ಷ ಜಿನ್​ಪಿಂಗ್ ಅವರ ಪ್ರಮುಖ ವ್ಯೂಹಾತ್ಮಕ ನಿರ್ಧಾರವನ್ನು, ರಾಷ್ಟ್ರೀಯ ಸಾರ್ವಭೌಮತೆ ಮತ್ತು ಭೌಗೋಳಿಕ ಏಕತೆಯನ್ನು ಕಾಪಾಡುವ ಏಕೈಕ ಅಜೆಂಡಾ ಈ ಸಭೆಯದ್ದಾಗಿತ್ತು.

ಸಮರ ಸಂಪನ್ಮೂಲಗಳ ಸಮನ್ವಯ: ರಾಷ್ಟ್ರೀಯ ರಕ್ಷಣಾ ಆಯೋಗವು ಏಳು ಮಾದರಿಯ ರಾಷ್ಟ್ರೀಯ ಸ್ತರದ ಸಮರ ಸಂಪನ್ಮೂಲ ಬಳಕೆಗೆ ಸಮನ್ವಯ ವನ್ನು ಆಯಾ ಪ್ರಾಂತ್ಯಗಳೇ ಮಾಡಬೇಕು ಎಂದು ಸೂಚಿಸಿದೆ. ಇದರಲ್ಲಿ 64 ಸಂಖ್ಯೆಯ ಹತ್ತು ಸಾವಿರ ಟನ್ ರೋಲ್ ಆನ್/ ರೋಲ್ ಆಫ್ ಹಡುಗಗಳು, 38 ವಿಮಾನಗಳು, 588 ರೈಲು ಬೋಗಿಗಳು, ವಿಮಾನ ನಿಲ್ದಾಣ, ಬಂದರು ಸೇರಿ 19 ನಾಗರಿಕ ಸೌಲಭ್ಯಗಳು ಒಳಗೊಂಡಿವೆ.

ಕ್ವಾಡ್ ರಾಷ್ಟ್ರಗಳ ಆದ್ಯತೆ: ಜಪಾನ್​ನ ಟೋಕಿಯೋದಲ್ಲಿ ನಡೆಯುತ್ತಿರುವ ಕ್ವಾಡ್ ಶೃಂಗ, ತೈವಾನ್ ಜಲಸಂಧಿ ವಿಚಾರಕ್ಕೆ ಆದ್ಯತೆ ನೀಡಿದೆ. ಇದರ ರಕ್ಷಣೆಗೆ ಜಪಾನ್ ಮತ್ತು ಇತರೆ ರಾಷ್ಟ್ರಗಳೊಂದಿಗೆ ಅಮೆರಿಕ ಇರಲಿದೆ ಎಂದು ಜೋ ಬೈಡೆನ್ ಜಪಾನ್ ಪ್ರಧಾನಿ ಕಿಶಿದಾ ಫುಮಿಯೋ ಜತೆಗಿನ ಸೋಮವಾರದ ಜಂಟಿ ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ.

ಚೀನಾ-ತೈವಾನ್ ಇತಿಹಾಸ: ತೈವಾನ್ ಚೀನಾದ ಪ್ರಾಂತ್ಯವಾಗಿ ಕೇವಲ 10 ವರ್ಷ ಇತ್ತು. ಇದಾಗಿ 1895ರಲ್ಲಿ ತೈವಾನನ್ನು ಜಪಾನ್​ನ ವಸಾಹತು ಆಗಿ ಸೇರ್ಪಡೆಗೊಳಿಸಲಾಗಿತ್ತು. ಬಳಿಕ ಎರಡನೇ ವಿಶ್ವ ಮಹಾಯುದ್ಧದ ಕೊನೆಗೆ ಚಿಯಾಂಗ್ ಕೈ-ಶೇಖ್ ಅವರ ರಿಪಬ್ಲಿಕ್ ಆಫ್ ಚೀನಾಕ್ಕೆ ತೈವಾನ್ ಹಸ್ತಾಂತರಗೊಂಡಿತು. ಪುನಃ 1949ರಲ್ಲಿ ಚಿಯಾಂಗ್ ತನ್ನ ಸರ್ಕಾರವನ್ನು ಚೀನಾದಿಂದ ದ್ವೀಪಕ್ಕೆ ಸ್ಥಳಾಂತರಗೊಳಿಸಿದಾಗ ತೈವಾನ್ ಚೀನಾದಿಂದ ಪ್ರತ್ಯೇಕಗೊಂಡಿತು. ಈ ಸಂದರ್ಭದಲ್ಲಿ ಚೀನಾ ಮೇನ್​ಲ್ಯಾಂಡ್​ನಲ್ಲಿ ಮಾವೋ ಝೆಡಾಂಗ್​ರ ಕಮ್ಯೂನಿಸ್ಟ್ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಅಲ್ಲಿಂದೀಚೆಗೆ ಉಭಯ ರಾಷ್ಟ್ರಗಳ ನಡುವೆ ಆರ್ಥಿಕ ಮತ್ತು ವ್ಯಾಪಾರ ಸಂಬಂಧ ಬಲಿಷ್ಠವಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ತೈವಾನ್ ಮೇಲೆ ರಾಜಕೀಯ ಹಿಡಿತ ಸಾಧಿಸಲು ಚೀನಾ ಪ್ರಯತ್ನಿಸುತ್ತಿದೆ.