ನ್ಯೂಸ್

ನಮ್ಮನಮ್ಮಲ್ಲಿ ಬೆಂಕಿ ಹಚ್ಚಿ ಲಡಾಖ್​ನಲ್ಲಿ ಚಳಿ ಕಾಯಿಸಿಕೊಳ್ಳಲು ಯತ್ನಿಸುತ್ತಿರುವ ಚೀನಾ

ನವದೆಹಲಿ: ಲಡಾಖ್​ ಪೂರ್ವಭಾಗದಲ್ಲಿ ಇದೀಗ ತಾನು ಅತಿಕ್ರಮಿಸಿಕೊಂಡಿರುವ ಜಾಗಗಳನ್ನು ತನಗೆ ಬಿಟ್ಟುಕೊಟ್ಟು, ಭಾರತೀಯ ಸೇನೆ ಹಿಂದೆಸರಿಯುವಂತೆ ಮಾಡಲು ಚೀನಾ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಅದು ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಮತ್ತು ಕಾಂಗ್ರೆಸ್​ ಸೇರಿ ಪ್ರತಿಪಕ್ಷಗಳ ನಡುವೆ ತಿಕ್ಕಾಟ ತಂದಿಟ್ಟು, ಲಡಾಖ್​ನಲ್ಲಿ ಚಳಿ ಕಾಯಿಸಿಕೊಳ್ಳಲು ಚೀನಾ ಯತ್ನಸುತ್ತಿದೆ.

ಆದರೆ, ಚೀನಾದ ಈ ಆಟ ಯಶಸ್ವಿಯಾಗದಂತೆ ತಡೆಯಲು ನಿರ್ಧರಿಸಿರುವ ಭಾರತೀಯ ಸೇನಾಪಡೆ, 2020ರ ಏಪ್ರಿಲ್​ ಮೊದಲು ಇದ್ದಂತೆ ಯಥಾಸ್ಥಿತಿಯ ಮರುಸ್ಥಾಪನೆಗೆ ಸಮ್ಮತಿಸದ ಹೊರತು ವಾಸ್ತವ ಗಡಿರೇಖೆ ಬಳಿಯ ಮುಂಚೂಣಿ ನೆಲೆಗಳಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಪಟ್ಟುಹಿಡಿದು ಕುಳಿತಿದೆ.
ಗಡಿಯಿಂದ ಹಿಂದೆಸರಿಯುವ ಕುರಿತು ಮಾತುಕತೆ ನಡೆದ ಪ್ರತಿಬಾರಿಯೂ ಭಾರತ 2020ರ ಏಪ್ರಿಲ್​ನಲ್ಲಿದ್ದಂತೆ ಎಲ್​ಎಸಿ ಬಳಿ ಯಥಾಸ್ಥಿತಿ ಮರುಸ್ಥಾಪನೆಯಾಗಬೇಕು. ಆಗಮಾತ್ರ ಉಭಯ ರಾಷ್ಟ್ರಗಳೊಂದಿಗಿನ ದ್ವಿಪಕ್ಷೀಯ ಸಂಬಂಧ ಸಾಮಾನ್ಯ ಸ್ಥಿತಿಗೆ ಮರಳಲು ಸಾಧ್ಯ ಎಂದು ಪ್ರತಿಪಾದಿಸುತ್ತಲೇ ಇದೆ. ಆದರೆ, ಚೀನಾ ಇದನ್ನು ಒಪ್ಪುತ್ತಿಲ್ಲ.

ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ ವಾಸ್ತವ ಗಡಿರೇಖೆಯ ಬಳಿ ಬಿರುಗಣ್ಣಿನ ನೋಟ ಬೀರಿಕೊಂಡು ಕೂರುವ ಸ್ಪರ್ಧೆ ಆರಂಭಿಸಿದೆ. ಇದಕ್ಕೆ ಸರಿಯಾಗಿ ಭಾರತೀಯ ಸೇನಾಪಡೆ ಕೂಡ 1,597 ಕಿ.ಮೀ. ಉದ್ದದ ವಾಸ್ತವ ಗಡಿರೇಖೆಯುದ್ದಕ್ಕೂ ಆ ಸ್ಪರ್ಧೆಯಲ್ಲಿ ಕ್ರಿಯಾಶೀಲವಾಗಿ ಭಾಗಿಯಾಗುತ್ತಿದೆ. ತಾವಾಗಿಯೇ ಅವರು ಮೊದಲಿಗೆ ಕಣ್ಣು ಮಿಟುಕಿಸದ ಹೊರದು ನಾವು ಕೂಡ ಬಿರುಗಣ್ಣಿನ ನೋಟದ ಸ್ಪರ್ಧೆಯನ್ನು ಮುಂದುವರಿಸುತ್ತೇವೆ. ಅಷ್ಟೇ ಅಲ್ಲ, ಗಡಿ ವಿವಾದದಿಂದಾಗಿ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ ಎಂಬುದನ್ನು ಚೀನಾಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇವೆ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಚೀನಾ ಮೂಲದ 100ಕ್ಕೂ ಹೆಚ್ಚು ಮೊಬೈಲ್​ ಆ್ಯಪ್​ಗಳನ್ನು ಮತ್ತು ಅವರ ತದ್ರೂಪಿ ಆ್ಯಪ್​ಗಳನ್ನು ಭಾರತ ನಿಷೇಧಿಸಿದೆ. ಅಲ್ಲದೆ, ಸರ್ಕಾರಿ ಗುತ್ತಿಗೆಗಳು ಚೀನಾದ ಸಂಸ್ಥೆಗಳಿಗೆ ಸಿಗದಂತೆ ಮಾಡಲು ನಿಯಮಗಳಲ್ಲಿ ಸೂಕ್ತ ಮಾರ್ಪಾಟುಗಳನ್ನು ಮಾಡಿದೆ. ಇದೀಗ ಚೀನಾದ ವಿಶ್ವವಿದ್ಯಾಲಯಗಳೊಂದಿಗೆ ಭಾರತೀಯ ವಿಶ್ವವಿದ್ಯಾಲಯಗಳು ಮಾಡಿಕೊಂಡಿರುವ ಒಡಂಬಡಿಕೆಗಳನ್ನು ರದ್ದುಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ.

ತನ್ಮೂಲಕ ತಾನು ಅತಿಕ್ರಮಿಸಿರುವ ಭಾರತೀಯ ಭೂಮಿಯಿಂದ ಕಾಲ್ತೆಗೆದು, 2020ರ ಏಪ್ರಿಲ್​ನ ಯಥಾಸ್ಥಿತಿ ಮರುಸ್ಥಾಪಿಸದ ಹೊರತು ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಹಳಸುತ್ತಲೇ ಸಾಗುತ್ತದೆ ಎಂಬ ಸಂದೇಶವನ್ನು ಪೀಪಲ್ಸ್​ ಲಿಬರೇಷನ್​ ಆರ್ಮಿಯ (ಪಿಎಲ್​ಎ) ಮಹಾದಂಡನಾಯಕ ಕ್ಸಿ ಜಿನ್​ಪಿಂಗ್​ಗೆ ಕೊಡಲು ಭಾರತ ಪ್ರಯತ್ನಿಸುತ್ತಿದೆ.

ಆದರೂ ಚೀನಾ ತನ್ನ ಪ್ರಯತ್ನವನ್ನು ಕೊನೆಗಾಣಿಸುವಂತೆ ಕಾಣುತ್ತಿಲ್ಲ. ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಎಲ್​ಎಸಿ ಬಳಿ ತಾನು ಸೃಷ್ಟಿಸಿರುವ ಹೊಸ ಪದ್ಧತಿಯನ್ನು ಒಪ್ಪಿಕೊಳ್ಳುವಂತೆ ಮಾಡುವ ರಣತಂತ್ರದೊಂದಿಗೆ ಕಾರ್ಯಾಚರಣೆ ಮುಂದುವರಿಸಿದೆ.

ಚೀನಾದೊಂದಿಗೆ ಲಡಾಖ್​ ಬಿಕ್ಕಟ್ಟು ಮುಂದುವರಿಸುವ ಕುರಿತು ರಕ್ಷಣಾ ಸಚಿವಾಲಯ ಸರ್ಕಾರಿ ವೆಬ್​ಸೈಟ್​ನಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿರುವಂತೆ ಗುರುವಾರ ರಾಜಕೀಯವಾಗಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಲಡಾಖ್​ ಬಿಕ್ಕಟ್ಟನ್ನು ಪರಿಹರಿಸುವ ಕುರಿತು ಸರ್ಕಾರ ಮಾಡುತ್ತಿರುವ ಪ್ರಯತ್ನಗಳು ಒಳಗೊಂಡಂತೆ ರಕ್ಷಣಾ ಕಾರ್ಯದರ್ಶಿ ಸಿದ್ಧಪಡಿಸಿ ಸಚಿವ ಸಂಪುಟ ಕಾರ್ಯದರ್ಶಿಗೆ ಸಲ್ಲಿಸಿರುವ ಮಾಸಿಕ ವರದಿಯಲ್ಲಿನ ಕಾರ್ಯಾಚರಣೆಯ ವಿವರಗಳು ಇದ್ದ ಭಾಗವನ್ನು ಭಾಗವನ್ನು ತೆಗೆದುಹಾಕದೆ, ರಕ್ಷಣಾ ಸಚಿವಾಲಯದ ಅಂದಿನ ಕಾರ್ಯದ ಕುರಿತ ಮಾಹಿತಿಯನ್ನು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಪ್ರಕಟಿಸಿರುವುದು ಇದಕ್ಕೆ ಕಾರಣವಾಗಿದೆ.

ಲಡಾಕ್​ ಬಿಕ್ಕಟ್ಟಿನ ವಿಷಯವಾಗಿ ಭಾರತ ಹಾಗೂ ಜಾಗತಿಕ ಶಕ್ತಿಗಳ ಹಾದಿ ತಪ್ಪಿಸಲು ಸಾಕಷ್ಟು ಪ್ರಯತ್ನಿಸುತ್ತಿದೆ. ಲಡಾಖ್​ ಬಿಕ್ಕಟ್ಟ ಪರಿಹಾರವಾಗಿದೆ. ಬಹುತೇಕ ಎಲ್ಲ ವಿವಾದಾತ್ಮಕ ಸ್ಥಳಗಳಿಂದಲೂ ಸೇನೆಯನ್ನು ವಾಪಸು ಕರೆಯಿಸಿಕೊಂಡಿದ್ದೇವೆ ಎಂಬ ಸುಳ್ಳು ಮಾಹಿತಿ ನೀಡಿ ಎಲ್ಲರನ್ನೂ ನಂಬಿಸಲು ಚೀನಾ ಪ್ರಯತ್ನಿಸಿತ್ತು. ಆದರೆ, ಭಾರತೀಯ ಸರ್ಕಾರ ಮಾತ್ರ ಚೀನಾದ ಈ ಮಾತನ್ನು ನಂಬಲು ನಿರಾಕರಿಸಿತು. ಹಾಗಾಗಿ ಚೀನಾ ಆ ವಿಷಯವಾಗಿ ಇದುವರೆಗೆ ಆಗಿರುವ ಸಕಾರಾತ್ಮಕ ವಿಷಯಗಳನ್ನಷ್ಟೇ ಜಾಗತಿಕವಾಗಿ ಪ್ರಸ್ತಾಪಿಸುವ ಅನಿವಾರ್ಯತೆ ಸಿಲುಕಿಕೊಂಡಿತು.

ವಾಸ್ತವದಲ್ಲಿ ಚೀನಾ ಗಸ್ತು ಪಾಯಿಂಟ್​ 17 ಮತ್ತು 17ಎ (ಗೋಗ್ರಾದ ಸಾಮಾನ್ಯ ಪ್ರದೇಶ) ಹಾಗೂ ಪ್ಯಾಂಗಾಂಗ್​ ತ್ಸೊ ಸರೋವರದ ಏಣುಗಳಲ್ಲಿ ನಿಯೋಜಿಸಿರುವ ತನ್ನ ಯೋಧರನ್ನು ಹಿಂಪಡೆಯಲು ಪಿಎಲ್​ಎ ಹಿಂದೇಟು ಹಾಕುತ್ತಿದೆ ಎಂಬ ಸಂಗತಿಯನ್ನು ಭಾರತೀಯ ಸೇನೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿತ್ತು. ಹಾಗಾಗಿ, ಈ ಭಾಗದಿಂದ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಕೇಂದ್ರ ಸರ್ಕಾರ ಕೂಡ ನಿರಾಕರಿಸುತ್ತಿದೆ.