ನ್ಯೂಸ್

ಗಡಿಯಲ್ಲಿ ಸತ್ತ ಚೀನಾ ಸೈನಿಕರು ಎಷ್ಟು? ಅಮೆರಿಕ ಗುಪ್ತಚರ ಅಧಿಕಾರಿಗಳು ಹೇಳಿದ ಲೆಕ್ಕವೇ ಬೇರೆ...!

ವಾಷಿಂಗ್ಟನ್​: ಜಗತ್ತಿನ ಎರಡು ಶಕ್ತಿಶಾಲಿ ಹಾಗೂ ಜನಸಂಖ್ಯೆಯನ್ನೂ ಹೆಚ್ಚಾಗಿ ಹೊಂದಿರುವ ರಾಷ್ಟ್ರಗಳು ಗಡಿಭಾಗದಲ್ಲಿ ಹೊಡೆದಾಡಿಕೊಳ್ಳುತ್ತಿರುವುದನ್ನು ಇಡೀ ವಿಶ್ವ ನೋಡುತ್ತಿದೆ. ಭಾರತ ಮತ್ತು ಚೀನಾ ನಡುವಿನ ಸಂಘರ್ಷದ ಬಗ್ಗೆ ಈಗಾಗಲೇ ವಿಶ್ವಸಂಸ್ಥೆಯೂ ವಿಶಾದ ವ್ಯಕ್ತಪಡಿಸಿದೆ.

ಸೋಮವಾರ ನಡೆದ ಸಂಘರ್ಷದಲ್ಲಿ ಎರಡೂ ಕಡೆಯ ಸೈನಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಭಾರತ ಈಗಾಗಲೇ ತಮ್ಮ 20 ಯೋಧರು ಹುತಾತ್ಮರಾಗಿದ್ದಾಗಿ ತಿಳಿಸಿದೆ. ಹಾಗೇ, ಚೀನಾದ 43 ಸೈನಿಕರನ್ನು ಹೊಡೆದುರುಳಿಸಿದ್ದಾಗಿ ಮಾಹಿತಿ ನೀಡಿದೆ.

ಆದರೆ ಕುತಂತ್ರಿ ಚೀನಾ ಸೇನೆ ಇನ್ನೂ ಸಾವಿನ ಲೆಕ್ಕವನ್ನು ತಿಳಿಸಿಲ್ಲ. ತಮ್ಮ ಎಷ್ಟು ಸೈನಿಕರು ಸತ್ತಿದ್ದಾರೆಂದು ಹೇಳುತ್ತಿಲ್ಲ. ಈ ಮಧ್ಯೆ ಭಾರತ ಮತ್ತು ಚೀನಾ ಮಧ್ಯದ ಬಿಕ್ಕಟ್ಟನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರಲ್ಲಿ ಅಮೆರಿಕ ಕೂಡ ಒಂದು. ಇದೀಗ ಅಮೆರಿಕದ ಸುದ್ದಿ ಮಾಧ್ಯಮವೊಂದು ಚೀನಾದ 35 ಸೈನಿಕರು ಹತ್ಯೆಗೀಡಾಗಿದ್ದಾರೆ ಎಂದು ವರದಿ ಮಾಡಿದೆ. ಪಿಟಿಐ ಕೂಡ ಇದೇ ಸಂಖ್ಯೆಯನ್ನು ವರದಿ ಮಾಡಿದೆ. ಇದನ್ನೂ ಓದಿ: ದೆಹಲಿಯಲ್ಲಿರುವ ಚೀನಾ ರಾಯಭಾರಿ ಕಚೇರಿಯೆದುರು ಪ್ರತಿಭಟನೆ; 22 ಜನರನ್ನು ವಶಕ್ಕೆ ಪಡೆದ ಪೊಲೀಸರು​

ಭಾರತ ಮತ್ತು ಚೀನಾ ನಡುವಿನ ಹೊಡೆದಾಟದಲ್ಲಿ ಮೃತ ಚೀನಿ ಸೈನಿಕರ ಸಂಖ್ಯೆ ಅಮೆರಿಕದ ಗುಪ್ತಚರ ದಳದ ಅಧಿಕಾರಿಗಳಿಗೆ ಲಭ್ಯವಾಗಿದೆ ಎಂದು ಅಲ್ಲಿನ ಮಾಧ್ಯಮ ಹೇಳಿದೆ.

ಚೀನಾ ಸೇನೆಯ ಓರ್ವ ಹಿರಿಯ ಅಧಿಕಾರಿ ಸೇರಿ ಒಟ್ಟು 35 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಗುಪ್ತಚರ ದಳದ ಅಧಿಕಾರಿಗಳು ಪತ್ತೆಹಚ್ಚಿದ್ದಾಗಿ ಉನ್ನತ ಮೂಲಗಳು ತಿಳಿಸಿವೆ. ಹಾಗೇ, ಈ ಹೊಡೆದಾಟದಲ್ಲಿ ದೊಣ್ಣೆ ಮತ್ತು ಚಾಕು, ಕಲ್ಲುಗಳನ್ನು ಬಳಸಲಾಗಿದೆ. ಕಡಿದಾದ ಕಂದಕಗಳಿಗೆ ನೂಕಿ ಹತ್ಯೆ ಮಾಡಲಾಗಿದೆ ಎಂದು ಯುಎಸ್​ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ, ಇಂಥ ಸಾವು ತಮ್ಮ ಸಶಸ್ತ್ರ ಪಡೆಗಳಿಗೆ ಆದ ಅವಮಾನ ಎಂದು ಚೀನಾ ಸರ್ಕಾರ ಭಾವಿಸಿದೆ ಎಂದೂ ಹೇಳಿವೆ. ಇದನ್ನೂ ಓದಿ: ಕಡಿಮೆ ಬಾಡಿಗೆಗೆ ಮನೆ: ಯೋಜನೆ ಅನುಷ್ಠಾನದ ಬಗ್ಗೆ ಚಿಂತನೆ ನಡೆಸಿದ ಮೋದಿ ಸರ್ಕಾರ

ಈ ಹಿಂದೊಮ್ಮೆ ಭಾರತ-ಚೀನಾ ಗಡಿ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗಿನ ಸಂಘರ್ಷದ ಬಗ್ಗೆ ಯಾವುದೇ ಟ್ವೀಟ್ ಮಾಡಿಲ್ಲ. (ಏಜೆನ್ಸೀಸ್​)