ನ್ಯೂಸ್

ಕೊರೊನಾ ವೈರಸ್​ ಮೊದಲು ಪತ್ತೆಹಚ್ಚಿ ವೈರಸ್​ನಿಂದಲೇ ವೈದ್ಯನ ಸಾವು ಪ್ರಕರಣ: ತೀವ್ರ ಟೀಕೆಯ ಬಳಿಕ ತನಿಖೆಗೆ ಆದೇಶ

ಬೀಜಿಂಗ್​: ಚೀನಾದಲ್ಲಿ ಸಾಲು ಸಾಲಾಗಿ ಜನರನ್ನು ಬಲಿ ಪಡೆದುಕೊಳ್ಳುತ್ತಿರುವ ಮಾರಕ ಕೊರೊನಾ ವೈರಸ್​ ಅನ್ನು ಮೊದಲೇ ಪತ್ತೆ ಹಚ್ಚಿ, ಬಳಿಕ ಬಂಧನಕ್ಕೊಳಗಾಗಿ ಅದೇ ವೈರಸ್​ ಸೋಂಕಿನಿಂದಲೇ ಮೃತಪಟ್ಟಿದ್ದಾರೆ ಎನ್ನಲಾಗಿರುವ ವೈದ್ಯನ ಸಾವಿನ ತನಿಖೆಗೆ ಚೀನಾದ ಆ್ಯಂಟಿ ಗ್ರಾಫ್ಟ್​ ವಾಚ್​ಡಾಗ್ ಶುಕ್ರವಾರ​ ಆದೇಶಿಸಿದೆ.

ವೈದ್ಯನ ಸಾವು ಚೀನಾದ್ಯಂತ ಕಿಡಿ ಹೊತ್ತಿಸಿದ್ದು, ಕೊರೊನಾ ವೈರಸ್​ ತುರ್ತು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸದ ಚೀನಾ ಸರ್ಕಾರದ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ವೈದ್ಯನ ಸಾವಿನ ತನಿಖೆಗೆ ಆದೇಶಿಸಲಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಚೀನಾದ ಶಿಸ್ತು ಪರಿಶೀಲನಾ ಆಯೋಗ, ಒಂದು ತಂಡವು ವೈರಸ್​ ಪೀಡಿತ ಹಾಗೂ ವೈದ್ಯ ಸಾವಿಗೀಡಾದ ವುಹಾನ್​ ನಗರಕ್ಕೆ ತನಿಖೆಗಾಗಿ ತೆರಳಲಿದೆ ಎಂದು ತಿಳಿಸಿದೆ.

ಅಂದಹಾಗೆ ವೈದ್ಯ ಲಿ ವೆನ್​ಲಿಯಾಂಗ್​(34) ವುಹಾನ್​ ನಗರದ ಕೇಂದ್ರೀಯ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಗುರುವಾರ ವೈರಸ್​ ಸೋಕಿನಿಂದಲೇ ಸಾವಿಗೀಡಾಗಿದ್ದಾರೆ ಎಂದು ಎಲ್ಲೆಡೆ ವರದಿಯಾಗಿತ್ತು. ಇದು ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಏಕೆಂದರೆ ಕೊರೊನಾ ವೈರಸ್​ ಅನ್ನು ಮೊದಲು ಪತ್ತೆ ಹಚ್ಚಿದ್ದೆ ವೆನ್​ಲಿಯಾಂಗ್ ಎಂದು ಹೇಳಲಾಗಿದೆ.

ವೆನ್​ಲಿಯಾಂಗ್​ ಓರ್ವ ನೇತ್ರಶಾಸ್ತ್ರಜ್ಞ. ವುಹಾನ್​ನ ಕೇಂದ್ರೀಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಡಿಸೆಂಬರ್​ 30ರಲ್ಲಿ ತನ್ನ ಸ್ನೇಹಿತನಿಗೆ ಖಾಸಗಿ ಸಂದೇಶದ ಮೂಲಕ ಜಿಲ್ಲೆಯಾದ್ಯಂತ ಸೋಂಕು ಹರಡುತ್ತಿರುವುದಾಗಿ ತಿಳಿಸಿದ್ದರು.

ಚೀನಾದ ಕೇಂದ್ರ ಹುಬೇ ಪ್ರಾಂತ್ಯದ ರಾಜಧಾನಿ ವುಹಾನ್​ನಲ್ಲಿ ಮೊದಲ ಬಾರಿಗೆ ವೈರಸ್​ ಸೋಂಕು ಕಾಣಿಸಿಕೊಂಡಾಗ ವೆನ್​ಲಿಯಾಂಗ್ ಮೊದಲು ವರದಿ ನೀಡಿದ್ದರು. ಕಳೆದ ಡಿಸೆಂಬರ್​​ನಲ್ಲೇ ವರದಿಯನ್ನು ನೀಡಿದ್ದರು. ಚೀನಾದ ಮೆಸೆಜಿಂಗ್​ ಆ್ಯಪ್​ ವೀಚ್ಯಾಟ್​ ಮೂಲಕವು ಇತರೆ ವೈದ್ಯರಿಗೂ ಮಾಹಿತಿಯನ್ನು ತಿಳಿಸಿದ್ದರು.

ತನ್ನ ಆಸ್ಪತ್ರೆಯಲ್ಲಿ 7 ರೋಗಿಗಳು ದಾಖಲಾಗಿದ್ದಾರೆ. ಅವರಿಗೆ ಸಾರ್ಸ್​​ ರೀತಿ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ದಾಖಲಾಗಿರುವ ಏಳು ರೋಗಿಯೂ ಹುಬೈನಲ್ಲಿನ ಒಂದೇ ಸಮುದ್ರ ಆಹಾರ ಮಾರುಕಟ್ಟೆಯಲ್ಲಿ ಪ್ರಾಣಿ ಮಾಂಸವನ್ನು ಸೇವಿಸಿದ್ದಾರೆ ಎಂದು ಮಾಹಿತಿ ನೀಡಿದ್ದರು.

ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕ ಕೊರೊನಾ ವೈರಸ್​ ಎಂಬುದು ತಿಳಿದಿದ್ದಾಗಿ ವೆನ್​ಲಿಯಾಂಗ್​ ವಿವರಿಸಿದ್ದರು. 2003ರಲ್ಲಿ ಚೀನಾ ಹಾಗೂ ವಿಶ್ವದ್ಯಾಂತ 800 ಜನರ ಸಾವಿಗೆ ಕಾರಣವಾಗಿದ್ದ ತೀವ್ರ ಉಸಿರಾಟದ ರೋಗದ ವೈರಸ್​​ ​(SARS-ಸಿವಿಯರ್​ ಅಕ್ಯೂಟ್​ ರೆಸ್ಪಿರೇಟರಿ ಸಿಂಡ್ರೋಮ್) ಒಳಗೊಂಡಂತೆ ಬಹುದೊಡ್ಡ ವೈರಸ್​ ಕುಟುಂಬವನ್ನು ಪರೀಕ್ಷೆಯಲ್ಲಿ ವೆನ್​ಲಿಯಾಂಗ್​ ಪತ್ತೆ ಹಚ್ಚಿ ಮಾಹಿತಿ ನೀಡಿದ್ದರು.

ವೆನ್​ಲಿಯಾಂಗ್​ ಅವರು ಮುಂಜಾಗ್ರತ ಕ್ರಮವಾಗಿ ತನ್ನ ಸ್ನೇಹಿತನಿಗೆ ಆತನ ಪ್ರೀತಿ ಪಾತ್ರರಾದವರನ್ನು ಕಾಪಾಡಿಕೊಳ್ಳಲು ಸಂದೇಶವನ್ನು ಕಳುಹಿಸಿದ್ದರು. ಆದರೆ, ರೋಗದ ಬಗ್ಗೆ ವೆನ್​ಲಿಯಾಂಗ್​ ಮಾಹಿತಿ ನೀಡಿದ ಕೆಲವೇ ಗಂಟೆಗಳಲ್ಲಿ ಅದು ಕಾಡ್ಗಿಚ್ಚಿನಂತೆ ಚೀನಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದಾದ ಬಳಿಕ ವೆನ್​ಲಿಯಾಂಗ್​ ವಾದವನ್ನು ಚೀನಾ ಸರ್ಕಾರ ತಳ್ಳಿ ಹಾಕಿ, ಅವರನ್ನು ಬಂಧಿಸಿದ್ದರು. ಇದೀಗ ಅದೇ ವೈರಸ್​ನಿಂದಲೇ ವೆನ್​ಲಿಯಾಂಗ್​ ಸಾವಿಗೀಡಾಗಿದ್ದು, ಸಾಕಷ್ಟು ಅನುಮಾನ ಹುಟ್ಟಿಸಿದೆ.

ವೆನ್​ಲಿಯಾಂಗ್​ ಸಾವಿಗೆ ಸಂತಾಪ ಸೂಚಿಸಿ, ಸರ್ಕಾರದ ವಿರುದ್ಧ ಚೀನಾದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಅಲ್ಲದೆ, ವೆನ್​ಲಿಯಾಂಗ್​ ತಾಯಿ ಕೂಡ ನನ್ನ ಮಗನಿಗೆ ಯಾವ ತೊಂದರೆಯು ಇರಲಿಲ್ಲ. ಅವನು ಸಮರ್ಥನಾಗಿದ್ದ ಎಂದು ತಿಳಿಸಿದ್ದಾರೆ. ಹೀಗಾಗಿ ವೆನ್​ಲಿಯಾಂಗ್​ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿರುವ ಹಿನ್ನೆಲೆಯಲ್ಲಿ ಇದೀಗ ತನಿಖೆಗೆ ಆದೇಶಿಸಲಾಗಿದೆ.

ಜನವರಿಯಲ್ಲಿ ಚೀನಾ ಸುಪ್ರೀಂಕೋರ್ಟ್​ ಕೂಡ ವೈರಸ್​ ಬಗ್ಗೆ ವದಂತಿ ಹುಟ್ಟುಹಾಕಿದವರನ್ನು ಶಿಕ್ಷಿಸಿದ್ದಕ್ಕೆ ವುಹಾನ್​ ಪೊಲೀಸರನ್ನು ಟೀಕಿಸಿತ್ತು. ಆ ಸಮಯದಲ್ಲಿ ಜನರು ವದಂತಿಯನ್ನು ನಂಬಿದ್ದರೆ, ಇಂದು ವೈರಸ್​ ಈ ಮಟ್ಟಿಗೆ ಪರಿಣಾಮ ಬೀರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.

ಕೊರೊನಾ ವೈರಸ್​ನಿಂದಾಗಿ ಚೀನಾದಲ್ಲಿ ಈವರೆಗೂ 630ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಸುಮಾರು 31 ಸಾವಿರ ಮಂದಿ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ ಏರುತ್ತಲೇ ಇದೆ. (ಏಜೆನ್ಸೀಸ್​)