ನ್ಯೂಸ್

ಭಾರತಕ್ಕೆ ನೆರವಿನ ಹಸ್ತ ಚಾಚಿದ ಚೀನಾದಿಂದ 1.5 ಕೋಟಿ ಪಿಪಿಇ, 15 ಲಕ್ ಟೆಸ್ಟಿಂಗ್​ ಕಿಟ್​ಗಳ ರವಾನೆ

ನವದೆಹಲಿ: ಕರೊನಾ ವಿರುದ್ಧ ಹೋರಾಡುತ್ತಿರುವ ಮುಂಚೂಣಿ ಪಡೆಯ ವೈದ್ಯರು, ದಾದಿಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಸುರಕ್ಷತೆಗಾಗಿ ಚೀನಾದಿಂದ ಪರ್ಸನಲ್​ ಪ್ರೊಟೆಕ್ಷನ್​ ಎಕ್ವಿಪ್​ಮೆಂಟ್​ (ಪಿಪಿಇ) ಹಾಗೂ ರ‍್ಯಾಪಿಡ್​ ಟೆಸ್ಟಿಂಗ್​ ಕಿಟ್​ಗಳು ಬರಲಿವೆ.

ಮಾಸ್ಕ್​, ಗೌನ್​, ಸನ್​ಗ್ಲಾಸ್​, ಕೈಗವಸು ಮೊದಲಾದವುಗಳನ್ನೊಳಗೊಂಡ 1.5 ಕೋಟಿ ಪಿಪಿಇ ಹಾಗೂ 15 ಲಕ್ಷ ಟೆಸ್ಟಿಂಗ್​ ಕಿಟ್​ಗಳಿಗಾಗಿ ಕೇಂದ್ರ ಸರ್ಕಾರ ಹಾಗೂ ವಿವಿಧ ಕಂಪನಿಗಳು ಈಗಾಗಲೇ ಬೇಡಿಕೆ ಸಲ್ಲಿಸಿವೆ. ಈ ಸಾಮಗ್ರಿಗಳ ಪೈಕಿ ಕೆಲವು ಉತ್ಪಾದನಾ ಹಂತದಲ್ಲಿವೆ, ಕೆಲವನ್ನು ಉತ್ಪಾದಿಸಲಾಗಿದೆ. ಕೆಲವನ್ನು ಈಗಾಗಲೇ ಭಾರತಕ್ಕೆ ಕಳುಹಿಸಲಾಗಿದೆ ಎಂದು ಚೀನಾದಲ್ಲಿರುವ ಭಾರತೀಯ ರಾಯಭಾರಿ ವಿಕ್ರಮ್​ ಮಿಸ್ರಿ ಮಾಹಿತಿ ನೀಡಿದ್ದಾರೆ.

ಈ ಬೇಡಿಕೆ ಹೊರತಾಗಿ ಚೀನಾ 1.7 ಲಕ್ಷ ಪಿಪಿಇಗಳನ್ನು ಚೀನಾ ಭಾರತಕ್ಕೆ ಸಹಾಯವಾಗಿ ನೀಡಿದೆ. ಸದ್ಯಕ್ಕೆ ಭಾರತದ ಪಿಪಿಇ ಹಾಗೂ ಟೆಸ್ಟಿಂಗ್​ ಕಿಟ್​ಗಳ ಬೇಡಿಕೆ ಚೀನಾದಿಂದಲೇ ಪೂರೈಕೆಯಾಗುತ್ತಿದೆ. ಈ ಸಾಧನಗಳ ಗುಣಮಟ್ಟದ ಬಗ್ಗೆ ಹಲವು ಯುರೋಪಿಯನ್​ ದೇಶಗಳಿಂದ ಆಕ್ಷೇಪ ಕೇಳಿ ಬಂದ ಹಿನ್ನೆಲೆಯಲ್ಲಿ ಏಪ್ರಿಲ್​ 10ರ ನಂತರ ಚೀನಾ ಇವುಗಳ ರಫ್ತಿನ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿದೆ. ಗುಣಮಟ್ಟ ಕಾಯ್ದುಕೊಳ್ಳುವಂತೆ ಎಚ್ಚರಿಸಿದೆ.

ಭಾರತದಲ್ಲೀಗ 3.87 ಲಕ್ಷ ಪಿಪಿಇಗಳು ದಾಸ್ತಾನು ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಅಲ್ಲದೇ, ಮುಂದಿನ ಆರು ವಾರಗಳಿಗೆ ಬೇಕಾಗುವಷ್ಟು ಟೆಸ್ಟಿಂಗ್​ ಕಿಟ್​ಗಳನ್ನು ಹೊಂದಿರುವುದಾಗಿ ಐಸಿಎಂಆರ್​ ತಿಳಿಸಿದ್ದು, 5 ಲಕ್ಷಕ್ಕೂ ಅಧಿಕ ಕಿಟ್​ಗಳನ್ನು ಚೀನಾ ಭಾರತದ ವಿವಿಧ ಸಂಸ್ಥೆಗಳಿಗೆ ಈಗಾಗಲೇ ರವಾನೆ ಮಾಡಿದೆ.

ಭಾರತದ ಬೇಡಿಕೆ ಪೂರೈಕೆಯಾಗುವಂತೆ ನೋಡಿಕೊಳ್ಳಲು ಎಲ್ಲ ಸರಬರಾಜು ಜಾಲಗಳನ್ನ ಮುಕ್ತವಾಗಿರುವಂತೆ ಕ್ರಮ ಕೈಗೊಳ್ಳಲು ಚೀನಾ ಅಧಿಕಾರಿಗಳೊಂದಿಗೆ ವಿಕ್ರಮ್​ ಮಾತನಾಡಿದ್ದಾರೆ. ಜತೆಗೆ ಗುಣಮಟ್ಟದ ವಸ್ತುಗಳು ರಫ್ತು ಆಗುವಂತೆ ನೋಡಿಕೊಳ್ಳುವುದಾಗಿ ಚೀನಾ ಭರವಸೆ ನೀಡಿದೆ. ಈ ತಿಂಗಳ ಅಂತ್ಯದೊಳಗಾಗಿ ಎಲ್ಲ ಪಿಪಿಇ ಹಾಗೂ ಟೆಸ್ಟಿಂಗ್​ ಕಿಟ್​ಗಳು ಭಾರತಕ್ಕೆ ರವಾನೆಯಾಗುವ ವಿಶ್ವಾಸ ಹೊಂದಲಾಗಿದೆ.