ನವದೆಹಲಿ: ಲಡಾಖ್ನ ಪೂರ್ವಭಾಗದ ಗಲ್ವಾನ್ ಕಣಿವೆ ಬಳಿಯಿಂದ ಹಿಂತೆಗೆಯುತ್ತಿರುವ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಯೋಧರು ವಾಸ್ತವ ಗಡಿರೇಖೆಯ ತಮ್ಮ ಭಾಗದಲ್ಲಿ ಅರುಣಾಚಲ ಪ್ರದೇಶ ಸುತ್ತಮುತ್ತ ಜಮಾವಣೆಗೊಳ್ಳುತ್ತಿದ್ದಾರೆ.
ಡೆಪ್ಸ್ಯಾಂಗ್ ಸಮತಟ್ಟಾದ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಪಿಎಲ್ಎ ಯೋಧರು ಅತ್ಯಂತ ಆಕ್ರಮಣಕಾರಿ ಶೈಲಿಯಲ್ಲಿ ನಿಯೋಜಿಸಲ್ಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ ಲಡಾಖ್ ವಲಯದಲ್ಲಿ ಚೀನಿಯ ವೈಮಾನಿಕ ಚಟುವಟಿಕೆಗಳು ಬಹುತೇಕ ಸ್ತಬ್ಧವಾಗಿದೆ ಎನ್ನಲಾಗಿದೆ.
ಇದೇ ವೇಳೆ ಭಾರತದ ಶಕ್ತಿಶಾಲಿಯಾದ ಚೀನಾ ಅಧ್ಯಯನ ಗುಂಪು (ಸಿಎಸ್ಜಿ) ಗುರುವಾರ ಸಭೆ ಸೇರಿ ಮಾತುಕತೆ ನಡೆಸಿತು. ಚೀನಾ ಸಂಬಂಧಿತ ಆಗುಹೋಗುಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವ ಈ ಗುಂಪು, ಗಲ್ವಾನ್, ಹಾಟ್ಸ್ಪ್ರಿಂಗ್ಸ್ ಮತ್ತು ಪ್ಯಾಂಗಾಂಗ್ ತ್ಸೊ ಸರೋವರದ ಸುತ್ತಮುತ್ತಲು ಪಿಎಲ್ಎ ಯೋಧರ ಹಿಂತೆಗೆತ ಪರಿಸ್ಥಿತಿಯನ್ನು ಅವಲೋಕಿಸಿತು.
ಬೇಹುಗಾರಿಕಾ ಪಡೆಗಳು ಮತ್ತು ಭಾರತೀಯ ಸೇನಾಪಡೆಯ ಎಲ್ಲ ವಿಭಾಗದ ಅಧಿಕಾರಿಗಳ ಪ್ರಾತಿನಿಧ್ಯ ಹೊಂದಿರುವ ಈ ಗುಂಪು, ಎಲ್ಎಸಿಯುದ್ದಕ್ಕೂ ನಿಯೋಜನೆಗೊಂಡಿರುವ ಚೀನಿ ಯೋಧರು ಹಿಂತೆಗೆಯುವಂತೆ ಮಾಡುವುದು ಹೇಗೆ ಎಂಬ ಪರಾಮರ್ಶೆ ನಡೆಸಿತು ಎನ್ನಲಾಗಿದೆ.