ನ್ಯೂಜೆರ್ಸಿ: ಭಾರತದ ಚಲನವಲನಗಳನ್ನು ತಿಳಿಯಲು ಪ್ರಯತ್ನಿಸುತ್ತಿರುವ ಚೀನಾ, ಹಿಂದು ಮಹಾಸಾಗರದಲ್ಲಿ ಸೀವಿಂಗ್ (ಹೈ) ಗ್ಲೈಡರ್ ಎಂಬ ಸಮುದ್ರ ಡ್ರೋನ್ಗಳನ್ನು ನಿಯೋಜಿಸುತ್ತಿದೆ ಎಂದು ತಿಳಿದುಬಂದಿದೆ.
ಈ ಡ್ರೋನ್ಗಳು ತಿಂಗಳ ಕಾಲ ನೀರೊಳಗೆ ಕೆಲಸ ನಿರ್ವಹಿಸಬಲ್ಲವು ಹಾಗೂ ನೌಕಾ ಗುಪ್ತಚರ ಮಾಹಿತಿಗಳನ್ನು ಕಲೆಹಾಕಬಲ್ಲವು ಎಂದು ರಕ್ಷಣಾ ವಿಶ್ಲೇಷಕರು ಹೇಳಿದ್ದಾರೆ. ಚೀನಾ ನಿಯೋಜಿಸುತ್ತಿರುವ ಸಮುದ್ರ ಗ್ಲೈಡರ್ಗಳು ಒಂದು ಬಗೆಯ ಅಂಡರ್ವಾಟರ್ ವೆಹಿಕಲ್ (ಯುಯುವಿ) ಆಗಿದ್ದು, ಇವುಗಳ ತಯಾರಿಕೆಯನ್ನು 2019ರ ಡಿಸೆಂಬರ್ ಮಧ್ಯದಲ್ಲಿ ಚೀನಾ ಪ್ರಾರಂಭಿಸಿತ್ತು. ಫೆಬ್ರವರಿ ವೇಳೆಗೆ 3,400ಕ್ಕೂ ಹೆಚ್ಚು ಗ್ಲೈಡರ್ಗಳನ್ನು ಉತ್ಪಾದಿಸಲಾಗಿದ್ದು, ಹಲವು ಕಡೆ ಗಳಲ್ಲಿ ನಿಯೋಜಿಸಲಾಗುತ್ತಿದೆ. ಇಂಥ ಒಂದು ಅಮೆರಿಕದ ಗ್ಲೈಡರ್ನ್ನು ಚೀನಾ 2016ರಲ್ಲಿ ವಶಪಡಿಸಿಕೊಂಡಿತ್ತು ಎನ್ನಲಾಗಿದೆ.
ಭಾರತಕ್ಕೆ ಆತಂಕ: ಹಿಂದು ಮಹಾಸಾಗರದಲ್ಲಿ ಚೀನಾ ಗ್ಲೈಡರ್ಗಳನ್ನು ನಿಯೋಜಿಸುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ. ಇವುಗಳು ದೊಡ್ಡ ರೆಕ್ಕೆಗಳನ್ನು ಹೊಂದಿದ್ದು, ದೀರ್ಘಾವಧಿಯವರೆಗೆ ಸಂಚರಿಸಬಲ್ಲವು. ಆದರೆ ಸಾಮಾನ್ಯ ಡ್ರೋನ್ಗಳಂತೆ ಇವು ಹೆಚ್ಚು ಚುರುಕಾಗಿರುವುದಿಲ್ಲ. ರಕ್ಷಣಾ ಕಾರ್ಯದ ಜತೆಗೆ ಈ ಗ್ಲೈಡರ್ಗಳು ಸಮುದ್ರಶಾಸ್ತ್ರದ ದತ್ತಾಂಶವನ್ನೂ ಸಂಗ್ರಹಿಸುತ್ತಿವೆ.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾದ ಆಕ್ರಮಣಕಾರಿ ನಿಲುವುಗಳನ್ನು ಎದುರಿಸಲು ಭಾರತವೂ ಹಲವು ಕ್ರಮಗಳನ್ನು ಕೈಗೊಂಡಿದೆ. ಇತ್ತೀಚೆಗೆ ನಡೆದ ಮಲಬಾರ್ ನೌಕಾ ಸಮರಾಭ್ಯಾಸವೂ ಅದರಲ್ಲಿ ಒಂದಾಗಿದ್ದು, ಕ್ವಾಡ್ನ ನಾಲ್ಕೂ ರಾಷ್ಟ್ರಗಳು ಇದೆ ಮೊದಲ ಬಾರಿ ಒಟ್ಟಾಗಿ ಸಮರಾಭ್ಯಾಸ ನಡೆಸುವ ಮೂಲಕ ಚೀನಾಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದವು.