ನ್ಯೂಸ್

CHINA-INDIA | ಎರಡು ದೇಶಗಳ ನಡುವೆ ವಿಮಾನ ಹಾರಾಟ ಪುನರಾರಂಭ; ಇದು ಸಕಾರಾತ್ಮಕ ಹೆಜ್ಜೆ ಎಂದ ಚೀನಾ

Delhi: ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಕಾರ್ಯತಂತ್ರದ ಮತ್ತು ದೀರ್ಘಕಾಲೀನ ದೃಷ್ಟಿಕೋನದಿಂದ ನೋಡಲು ಚೀನಾ ಸಿದ್ಧವಾಗಿದ್ದು, ಎರಡೂ ದೇಶಗಳ(CHINA-INDIA) ನಡುವಿನ ನೇರ ವಿಮಾನಗಳ ಪುನರಾರಂಭವು ಜನರಿಂದ ಜನರಿಗೆ ವಿನಿಮಯವನ್ನು ಹೆಚ್ಚಿಸುವ ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಐದು ವರ್ಷಗಳ ನಂತರ ಇದೇ ಮೊದಲ ಬಾರಿಗೆ ವಿಮಾನ ಹಾರಾಟ ನಡೆಸಲಿದ್ದು, ಅಕ್ಟೋಬರ್ 26 ರಿಂದ ನೇರ ವಿಮಾನ ಸಂಪರ್ಕ ಪುನರಾರಂಭಗೊಳ್ಳಲಿದೆ ಎಂದು ಭಾರತ ಅಕ್ಟೋಬರ್ 2 ರಂದು ಘೋಷಿಸಿತ್ತು.

ಇಂಡಿಗೋ ಅಕ್ಟೋಬರ್ 26 ರಿಂದ ಕೋಲ್ಕತ್ತಾದಿಂದ ಗುವಾಂಗ್‌ಝೌಗೆ ಮತ್ತು ನವೆಂಬರ್ 10, 2025 ರಿಂದ ದೆಹಲಿಯಿಂದ ಗುವಾಂಗ್‌ಝೌಗೆ ವಿಮಾನಗಳನ್ನು ಪುನರಾರಂಭಿಸುವುದಾಗಿ ದೃಢಪಡಿಸಿತು. ಚೀನಾ ಈಸ್ಟರ್ನ್ ಏರ್‌ಲೈನ್ಸ್ ನವೆಂಬರ್ 9 ರಿಂದ ತನ್ನ ಶಾಂಘೈ-ದೆಹಲಿ ಮಾರ್ಗವನ್ನು ಪುನರಾರಂಭಿಸುವುದಾಗಿ ತಿಳಿಸಿದೆ. ಬೀಜಿಂಗ್‌ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್, ಇದು ಚೀನಾ ಮತ್ತು ಭಾರತದ 2.8 ಶತಕೋಟಿಗೂ ಹೆಚ್ಚು ಜನರ ನಡುವೆ ಸ್ನೇಹ ವಿನಿಮಯವನ್ನು ಸುಗಮಗೊಳಿಸಲು ಸಕಾರಾತ್ಮಕ ಕ್ರಮವಾಗಿದೆ ಎಂದು ಪಿಟಿಐ ಉಲ್ಲೇಖಿಸಿದೆ. ದ್ವಿಪಕ್ಷೀಯ ಸಂಬಂಧಗಳ ಆರೋಗ್ಯಕರ ಮತ್ತು ಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಏಷ್ಯಾ ಮತ್ತು ಅದರಾಚೆಗೆ ಶಾಂತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡಲು ಬೀಜಿಂಗ್ ನವದೆಹಲಿಯೊಂದಿಗೆ ಕೈ ಜೋಡಿಸಲು ಸಿದ್ಧವಾಗಿದೆ ಎಂದು ಗುವೊ ತಿಳಿಸಿದ್ದಾರೆ.

2020 ರಲ್ಲಿ ಕೋವಿಡ್​​ 19 ಮಹಾಮಾರಿಯ ಕಾರಣದಿಂದ ನೇರ ವಿಮಾನ ಹಾರಾಟ ಸ್ಥಗಿತಗೊಂಡಿತ್ತು. ಆಗಸ್ಟ್ 31 ರಂದು ಟಿಯಾಂಜಿನ್‌ನಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ, ನೇರ ವಿಮಾನಗಳ ಪುನರಾರಂಭವನ್ನು ಪರಿಗಣಿಸಲಾಗುತ್ತಿದೆ ಎಂದು ಸುಳಿವು ನೀಡಿದ್ದರು.

2020 ರ ಜೂನ್‌ನಲ್ಲಿ ಮಾರಕ ಗಾಲ್ವಾನ್ ಕಣಿವೆ ಘರ್ಷಣೆಯ ನಂತರ ಭಾರತ-ಚೀನಾ ಸಂಬಂಧಗಳು ಹೇಳಿಕೊಳ್ಳುವ ರೀತಿಯಲ್ಲೇನು ಇರಲಿಲ್ಲ. ಅಂದಿನಿಂದ, ಎರಡೂ ಕಡೆಯವರು ಹಲವಾರು ಸುತ್ತಿನ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳನ್ನು ನಡೆಸಿದ್ದಾರೆ, ಇದು ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಪ್ರಮುಖ ಘರ್ಷಣೆಯ ಸ್ಥಳಗಳಿಂದ ಹಂತಹಂತವಾಗಿ ಸೈನ್ಯವನ್ನು ಹಿಂತೆಗೆದುಕೊಳ್ಳಲು ಕಾರಣವಾಗಿದೆ.(ಏಜೆನ್ಸೀಸ್​)