ನ್ಯೂಸ್

ತಾಲಿಬಾನ್ ಜೊತೆಗಿನ ಸ್ನೇಹ ಸಂಬಂಧ ಮುಂದುವರೆಸಲು ಸಿದ್ಧ: ಚೀನಾ

ಇಡೀ ಜಗತ್ತೆ ತಿರುಗಿ ನೋಡುವಂತೆ ಅಫ್ಘಾನಿಸ್ತಾನದ ಮೇಲೆ ತಾಲಿಬಾನ್‌ ಉಗ್ರರು ಸಂಪೂರ್ಣ ನಿಯಂತ್ರಣ ಸಾಧಿಸಿರುವ ಬೆನ್ನಲ್ಲೇ, ಅಫ್ಘಾನಿಸ್ತಾನದೊಂದಿಗೆ ಸ್ನೇಹಪರ ಮತ್ತು ಸಹಕಾರಿ ಸಂಬಂಧಗಳನ್ನು ಮುಂದುವರೆಸಲು ಸಿದ್ಧವಾಗಿದ್ದೇವೆ ಎಂದು ಚೀನಾದ ವಿದೇಶಾಂಗ ಇಲಾಖೆ ಹೇಳಿದೆ.

ತಾಲಿಬಾನ್‌ ಉಗ್ರರ ಅಬ್ಬರಕ್ಕೆ ಅಫ್ಘಾನಿಸ್ತಾನ ಸರ್ಕಾರ ಶರಣಾಗಿದ್ದು, ಅಧ್ಯಕ್ಷ ಅಶ್ರಫ್ ಘನಿ ಬೇರೆ ದೇಶಕ್ಕೆ ಪರಾರಿಯಾಗಿದ್ದಾರೆ. ಈ ನಡುವೇ ಚೀನಾ ದೇಶ ಮಾತ್ರ ಸ್ನೇಹ ಸಂಬಂಧ ಮುಂದುವರೆಸುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ತಾಲಿಬಾನಿಗಳ ಕೃತ್ಯಕ್ಕೆ ಸಹಕಾರ ನೀಡಲಿದೆಯಾ ಎಂಬ ಅನುಮಾನ ಮೂಡಿದೆ.

"ಅಫ್ಘಾನ್ ಜನರ ಹಕ್ಕನ್ನು ಚೀನಾ ಗೌರವಿಸುತ್ತದೆ ಮತ್ತು ಅಫ್ಘಾನಿಸ್ತಾನದೊಂದಿಗೆ ಸ್ನೇಹಪರ ಮತ್ತು ಸಹಕಾರಿ ಸಂಬಂಧಗಳನ್ನು ಮುಂದುವರೆಸಲು ಸಿದ್ಧವಾಗಿದ್ದೇವೆ," ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರೆ ಹುವಾ ಚುನಿಯಿಂಗ್‌ ಹೇಳಿದ್ದಾರೆ.

ಈ ನಡುವೆ ಅಫ್ಘಾನ್​​ನಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ತಾಲಿಬಾನಿಗಳು ಭಾನುವಾರ ರಾಜಧಾನಿ ಕಾಬೂಲ್‌ನ್ನು ವಶಪಡಿಸಿಕೊಳ್ಳುವ ಮೂಲಕ ಸಂಪೂರ್ಣ ಅಫ್ಘಾನಿಸ್ತಾನದ ನಿಯಂತ್ರಣವನ್ನು ತಾಲಿಬಾನ್‌ ಕೈಗೆ ತೆಗೆದುಕೊಂಡಿದೆ.