ನ್ಯೂಸ್

ಭಾರತ ಸೇರಿ ಹಲವು ರಾಷ್ಟ್ರಗಳಲ್ಲಿ 'ಕರೊನಾ ಕರ್ಫ್ಯೂ': ಅತ್ತ ಚೀನಾದಲ್ಲಿ ವೀಕೆಂಡ್​ ಮನರಂಜನೆ..500ಕ್ಕೂ ಹೆಚ್ಚು ಸಿನಿಮಾ ಥಿಯೇಟರ್​ಗಳು ಪ್ರಾರಂಭ

ಬೀಜಿಂಗ್​: ಚೀನಾದಲ್ಲಿ ಹುಟ್ಟಿ, ಅಲ್ಲಿ ಮರಣಮೃದಂಗ ಬಾರಿಸಿ ಇಡೀ ವ್ಯವಸ್ಥೆಯನ್ನು ಅಲ್ಲೋಲಕಲ್ಲೋಲ ಮಾಡಿದ ಕರೊನಾ ವೈರಸ್​ ಈಗ ಭಾರತ ಸೇರಿ ಹಲವರು ರಾಷ್ಟ್ರಗಳಿಗೆ ವ್ಯಾಪಿಸಿದೆ. ಇಟಲಿ, ಸ್ಪೇನ್​, ಅಮೆರಿಕದಂತಹ ಆಧುನಿಕ ವೈದ್ಯಕೀಯ ವ್ಯವಸ್ಥೆ ಇರುವ ದೇಶಗಳೇ ಕರೊನಾಕ್ಕೆ ತಲೆಬಾಗುವಂತಾಗಿದೆ. ಒಂದು ದಿನದಲ್ಲಿ ಅದೆಷ್ಟೋ ಹೊಸ ಕರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಭಾರತದಲ್ಲೂ ಅಷ್ಟೇ ಸದ್ಯ ಇರುವ ವೇಗದಲ್ಲೇ ಕರೊನಾ ಹರಡಿದರೆ ಇನ್ನೆರಡೇ ದಿನಗಳಲ್ಲಿ ಕರೊನಾ ಸೋಂಕಿತರ ಸಂಖ್ಯೆ 1000 ಗಡಿ ದಾಟಲಿದೆ. ಈಗ ಇಡೀ ದೇಶವೇ ಲಾಕ್​ಡೌನ್​ ಆಗಿದ್ದು ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಇನ್ನೇನೂ ಸಿಗುತ್ತಿಲ್ಲ. ಶಾಪಿಂಗ್​ ಮಾಲ್​ಗಳು, ಸಿನಿಮಾ ಥಿಯೇಟರ್​ಗಳೆಲ್ಲ ಬಂದ್​ ಆಗಿವೆ. ಜನರು ಹೊರಗೆ ಬಾರದ ಪರಿಸ್ಥಿತಿ ಎದುರಾಗಿದೆ.

ಆದರೆ ಚೀನಾದಲ್ಲಿ ಎಲ್ಲವೂ ಸಹಜಸ್ಥಿತಿಗೆ ಬರುತ್ತಿದೆ ಎಂದು ವರದಿಯಾಗಿದೆ. ಕರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಈಗಾಗಲೇ ಸೋಂಕು ತಗುಲಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೊಸ ಪ್ರಕರಣಗಳು ಕಂಡುಬರುತ್ತಿಲ್ಲ. ಹಾಗಾಗಿ ಚೀನಾ ನಿಧಾನವಾಗಿ ಸಹಜ ಪರಿಸ್ಥಿತಿಗೆ ಮರಳುತ್ತಿದೆ.

ಚೀನಾದಲ್ಲಿ ಈಗಾಗಲೇ 500ಕ್ಕೂ ಹೆಚ್ಚು ಸಿನಿಮಾ ಥಿಯೇಟರ್​ಗಳು ಮರುಪ್ರಾರಂಭವಾಗಿವೆ. ಕಳೆದ ಶುಕ್ರವಾರವೇ 486 ಸಿನಿಮಾ ಥಿಯೇಟರ್​ಗಳಲ್ಲಿ ಚಿತ್ರಪ್ರದರ್ಶನ ಶುರುವಾಗಿತ್ತು. ಈ ವೀಕೆಂಡ್​ನಷ್ಟೊತ್ತಿಗೆ 507 ಥಿಯೇಟರ್​​ಗಳು ಮರುಪ್ರಾರಂಭಗೊಂಡಿವೆ.

ಚೀನಾದ ಕ್ಸಿನ್‌ ಜಿಯಾಂಗ್, ಶಾಂಗ್‌ಡಾಂಗ್, ಸಿಚುವಾನ್, ಫುಜಿಯಾನ್ ಮತ್ತು ಗುವಾಂಗ್‌ಡಾಂಗ್ ಪ್ರಾಂತ್ಯಗಳಲ್ಲಿರುವ ಸಿನಿಮಾ ಥಿಯೇಟರ್​ಗಳು ಕಾರ್ಯಾರಂಭ ಮಾಡಿದ್ದು, ಏಪ್ರಿಲ್​ನಲ್ಲಿ ಮತ್ತಷ್ಟು ಥಿಯೇಟರ್​ಗಳು ಪ್ರಾರಂಭಗೊಳ್ಳಲಿವೆ ಎನ್ನಲಾಗಿದೆ.

ಸದ್ಯ ಥಿಯೇಟರ್​ಗಳಲ್ಲಿ ಇತ್ತೀಚಿನ ಪ್ರಸಿದ್ಧ ಚೈನೀಸ್​ ಸಿನಿಮಾಗಳು ತೆರೆ ಕಂಡಿವೆ. ಅವೆಲ್ಲ ಈಗಾಗಲೇ ಒಮ್ಮೆ ಪ್ರದರ್ಶನಗೊಂಡಿದ್ದವು. ಆದರೆ ಲಾಕ್​ಡೌನ್​ ನಿಮಿತ್ತ ಸ್ಥಗಿತಗೊಂಡಿದ್ದವು. ಆದರೂ ಈಗ ಮತ್ತೊಮ್ಮೆ ಬಿಡುಗಡೆ ಮಾಡಲಾಗಿದೆ. ಹಾಗೇ ಕೆಲವು ಹಾಲಿವುಡ್​ ಸಿನಿಮಾಗಳೂ ಬಿಡುಗಡೆಯಾಗಿವೆ. (ಏಜೆನ್ಸೀಸ್​)