ನ್ಯೂಸ್

ಚೀನಾ ರಾಖಿ ಬೇಡಿಕೆ ಇಳಿಕೆ: ಮೋದಿ ರಾಖಿಗೆ ಬೇಡಿಕೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ನವದೆಹಲಿ: ಚೀನಾ ವಸ್ತುಗಳನ್ನು ನಿಷೇಧಿಸುವಂತೆ ದೇಶಾದ್ಯಂತ ಆಗ್ರಹ ಕೇಳಿಬರುತ್ತಿರುವ ನಡುವೆಯೇ, ಈ ವರ್ಷದ ರಕ್ಷಾಬಂಧನ ಹಬ್ಬಕ್ಕೆ ಚೀನಾ ರಾಖಿಗಳಿಗೆ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸ್ಥಳೀಯ ರಾಖಿಗಳಿಗೆ ಬೇಡಿಕೆ ಹೆಚ್ಚಿದೆ. ಕೆಲ ರಾಜ್ಯಗಳಲ್ಲಿ ಮೋದಿ ರಾಖಿ ಜನಪ್ರಿಯವಾಗುತ್ತಿದೆ.

ದೇಶೀಯ ವಸ್ತುಗಳನ್ನು ಹೆಚ್ಚು ಬಳಸಲು ಪ್ರಧಾನಿ ಕರೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟವೂ (ಸಿಎಐಟಿ) ಕೆಲಸ ಆರಂಭಿಸಿದ್ದು, ರಕ್ಷಾಬಂಧನ ಹಬ್ಬಕ್ಕೆ ಭಾರತದ ರಾಖಿಗಳನ್ನೇ ಬಳಸುವಂತೆ ಕರೆ ನೀಡಿದೆ. ವಿವಿಧ ಬೀಜಗಳು, ಬಟ್ಟೆ, ರೇಷ್ಮೆ, ಬೇಳೆ ಕಾಳು, ಗೋಧಿ, ಅಕ್ಕಿ, ವರ್ಣಚಿತ್ರಗಳು, ಎಲೆಗಳು ಮತ್ತು ಜಾನಪದ ವಸ್ತುಗಳನ್ನು ಬಳಸಿಕೊಂಡು ರಾಖಿ ತಯಾರಿಸಲು ಕೋರಿದೆ. ಮಹಿಳಾ ವ್ಯಾಪಾರಿಗಳಿಗೆ ಈ ರೀತಿಯ ವಿಭಿನ್ನ ರಾಖಿಗಳನ್ನು ತಯಾರಿಸಿ ಮಾರಾಟ ಮಾಡಲು ಕೇಳಿಕೊಂಡಿದೆ.

ಮೋದಿ ರಾಖಿ

ಈ ಬಾರಿ ‘ಮೋದಿ ರಾಖಿ’ಯನ್ನು ಸಿಎಐಟಿ ತಯಾರಿಸಿದೆ. ತಾಮ್ರ, ಬೆಳ್ಳಿಯ ರಾಖಿಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಗಳನ್ನು ಅಂಟಿಸಲಾಗಿದೆ. ಈ ರಾಖಿಗೆ ಹಲವು ರಾಜ್ಯಗಳಲ್ಲಿ ಭಾರಿ ಬೇಡಿಕೆ ಬರುತ್ತಿದೆ. ಉತ್ಪಾದನೆಯಾದ ಕೆಲ ದಿನದಲ್ಲೇ ರಾಖಿ ಖಾಲಿಯಾಗುತ್ತಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.