ನ್ಯೂಸ್

ವಿಮಾನ ಯಾನ ಸಿಬ್ಬಂದಿಗೆ ಕರೊನಾ ವೈರಸ್​ ನಿಗ್ರಹ ಲಸಿಕೆ ನೀಡುತ್ತಿದೆ ಚೀನಾ...!

ಬೀಜಿಂಗ್​: ಚೀನಾ ಸರ್ಕಾರ ವಿಮಾನ ಯಾನ ಸಿಬ್ಬಂದಿಗೆ ಪ್ರಾಯೋಗಿಕ ಹಂತದಲ್ಲಿರುವ ಕರೊನಾ ವೈರಸ್​ ನಿಗ್ರಹ ಲಸಿಕೆ ನೀಡುತ್ತಿದೆ.

ಎಲ್ಲ ಬಗೆಯ ಆರ್ಥಿಕ ಚಟುವಟಿಕೆಗಳಿಗೆ ಮುಕ್ತ ಅವಕಾಶ ಕಲ್ಪಿಸಿರುವ ಚೀನಾದಲ್ಲಿ ಮತ್ತೆ ಕರೊನಾ ವೈರಸ್​ ಸೋಂಕು ವ್ಯಾಪಿಸದಿರಲು ಸೋಂಕಿಗೆ ಒಳಗಾಗುವ ಸಂಭಾವ್ಯತೆ ಹೆಚ್ಚಿರುವ ಜನರಿಗೆ ಕರೊನಾ ಲಸಿಕೆಯನ್ನು ನೀಡುತ್ತಿದೆ. ಜತೆಗೆ, ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಚೀನಾ ವಿಮಾನ ಯಾನ ಸಂಸ್ಥೆಗಳು, ವಿಮಾನ ನಿಲ್ದಾಣ, ಚೀನಾ ನ್ಯಾಷನಲ್​ ಏವಿಯೇಷನ್​ ಫ್ಯೂಲ್​ ಗ್ರೂಪ್​ ಟ್ರಾವೆಲ್​ ಸ್ಕೈ ಟೆಕ್ನಾಲಜಿ ಗ್ರೂಪ್​ ಸಿಬ್ಬಂದಿಗೆ ಪ್ರಾಯೋಗಿಕ ಹಂತದ ಲಸಿಕೆಯನ್ನು ಅವರು ಬಯಸಿದಲ್ಲಿ ಮಾತ್ರ ನೀಡಲಾಗುವುದು ಎಂದು ಚೀನಾ ಸರ್ಕಾರ ಮಾಹಿತಿ ನೀಡಿದೆ.

ಸದ್ಯ ಚೀನಾ ನಾಲ್ಕು ಲಸಿಕೆಗಳು ಮಾನವರ ಮೇಲಿನ ಪ್ರಯೋಗದ ಅಂತಿಮ ಹಂತದಲ್ಲಿ ಅದರಲ್ಲಿ ಒಂದು ಲಸಿಕೆಯನ್ನು ಈಗಾಗಲೇ ನೋಂದಣಿ ಮಾಡಿ, ಸೈನಿಕರಿಗೆ ಮಾತ್ರ ಬಳಸಲಾಗುತ್ತಿದೆ. ಇದೀಗ ವಿಮಾನ ಯಾನ ಸಿಬ್ಬಂದಿಗೂ ನೀಡಲು ನಿರ್ಧರಿಸಿದೆ.

ಸದ್ಯ ಚೀನಾದಲ್ಲಿ ಸ್ಥಳೀಯವಾಗಿ ಯಾವುದೇ ಕರೊನಾ ಸೋಂಕಿನ ಪ್ರಕರಣಗಳು ವರದಿಯಾಗುತ್ತಿಲ್ಲ. ಬದಲಿಗೆ ವಿದೇಶಗಳಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಕಾರಣದಿಂದಾಗಿ ವಿಮಾನ ಯಾನ ಸಿಬ್ಬಂದಿಗೆ ರಕ್ಷಣೆ ನೀಡಲಾಗುತ್ತಿದೆ ಎಂದು ಚೀನಾ ಹೇಳಿದೆ.