ನವದೆಹಲಿ: ಪಾಕಿಸ್ತಾನ, ನೇಪಾಳ ಮತ್ತು ಇತರೆ ಚಿಕ್ಕಪುಟ್ಟ ನೆರೆಯ ದೇಶಗಳು ಚೀನಾ ಪಾಲಿಗೆ ಎರೆಗಳಷ್ಟೇ. ಭಾರತದ ವಿರುದ್ಧ ಅವುಗಳನ್ನು ಛೂ ಬಿಡುವ ಕೆಲಸವನ್ನು ಚೀನಾ ನಿರಂತರವಾಗಿ ಮಾಡುತ್ತ ಬಂದಿದೆ. ಜೈವಿಕ ಅಸ್ತ್ರ ಸಾಮರ್ಥ್ಯ ವೃದ್ಧಿಗಾಗಿ ಪಾಕಿಸ್ತಾನದ ಜತೆಗೆ ರಹಸ್ಯ ಒಪ್ಪಂದ ಮಾಡಿಕೊಂಡಿರುವುದರ ಹಿಂದೆಯೂ ಬಲವಾದ ಕಾರಣವಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ದ ಕ್ಲಕ್ಸೋನ್ ಪ್ರಕಟಿಸಿರುವ ವಿಸ್ತೃತ ವರದಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನವನ್ನು ತೊಡಗಿಸುವುದೇ ಚೀನಾ ಪ್ರಮುಖ ಅಜೆಂಡಾ. ಇದನ್ನು ಭಾರತ ಮತ್ತು ಇತರೆ ಪ್ರಮುಖ ಪಾಶ್ಚಾತ್ಯ ದೇಶಗಳ ಗುಪ್ತಚರ ಮೂಲಗಳು ಖಾತ್ರಿಪಡಿಸಿವೆ. ಚೀನಾ ತನ್ನ ಅನಾಮಿಕತೆಯನ್ನು ಉಳಿಸಿಕೊಂಡು ಇತರ ದೇಶಗಳ ಜತೆಗೆ ಛಾಯಾ ಸಮರಕ್ಕೆ ಇಳಿಯುವುದಕ್ಕೆ ಪಾಕಿಸ್ತಾನ ಮತ್ತು ಇತರೆ ದೇಶಗಳನ್ನು ಬಳಸಿಕೊಳ್ಳುತ್ತಿದೆ.
ಚೀನಾದ ವಿವಾದಿತ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯು ಪಾಕಿಸ್ತಾನದ ಮಿಲಿಟರಿಯ ಡಿಫೆನ್ಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಆರ್ಗನೈಸೇಷನ್(ಡಿಇಎಸ್ಟಿಒ) ಜತೆಗೆ “Collaboration for Emerging Infectious Diseases and Studies on Biological Control of Vector Transmitting Diseases” ಎಂಬ ಅಧ್ಯಯನಕ್ಕೆ ಒಪ್ಪಂದ ಕೂಡ ಇಂಥದ್ದೇ ಪ್ರಯತ್ನವಾಗಿದೆ. ಪಾಕಿಸ್ತಾನದ ನೆಲದಲ್ಲಿ ಅಂತಹ ಅಪಾಯಕಾರಿ ಪ್ರಯೋಗ ನಡೆದರೆ ತಾನು ಸೇಫ್ ಎಂಬ ಭಾವನೆ ಚೀನಾಕ್ಕೆ ಇದೆ. ಅಕಸ್ಮಾತ್ ಏನಾದರೂ ತೊಂದರೆ ಆದರೆ ಅದರ ಪರಿಣಾಮವನ್ನು ಪಾಕಿಸ್ತಾನವೇ ಎದುರಿಸಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಪಾಕಿಸ್ತಾನವೇ ತಲೆತಗ್ಗಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಪಾಕಿಸ್ತಾನವನ್ನು ಅಪಾಯಕಾರಿ ಬಯೋ ಕೆಮಿಕಲ್ ಸಂಶೋಧನಾ ಕೇಂದ್ರಸ್ಥಾನವನ್ನಾಗಿ ರೂಪಿಸಬೇಕು ಎಂಬ ಪ್ರಯತ್ನದಲ್ಲಿದೆ ಚೀನಾ.
ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯು ಚೀನಾದ ದಕ್ಷಿಣ ಯುನ್ನಾಸ್ ಪ್ರಾಂತ್ಯದ ಕನ್ಮಿಂಗ್ ಎಂಬಲ್ಲಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಬಯಾಲಜಿ ಎಂಬ ಸಂಸ್ಥೆಯನ್ನು ಸ್ಥಾಪಿಸಿದೆ. ಅಲ್ಲಿ ಡಿಎನ್ಎ ಸಂಶೋಧನೆ ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ. ವಿಶೇಷವಾಗಿ ನಿಶ್ಚಿತ ಜನಾಂಗೀಯರನ್ನು ಗುರಿಯಾಗಿಸಿಕೊಂಡು ಜೈವಿಕ ಅಸ್ತ್ರ ತಯಾರಿಸುವ ಕೆಲಸ ಅಲ್ಲಿ ನಡೆಯುತ್ತಿದೆ. ಇದು ಭವಿಷ್ಯದಲ್ಲಿ ಭಾರಿ ತೊಂದರೆಯನ್ನು ತಂದೊಡ್ಡಲಿದೆ ಎಂದು ವರದಿ ಎಚ್ಚರಿಸಿದೆ.
ಕನ್ಮಿಂಗ್ನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಬಯಾಲಜಿ ಸಂಸ್ಥೆ ಚೀನೀಸ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್ ನಿಯಂತ್ರಣದಲ್ಲಿದೆ. ಇದು ಕೂಡ ಕ್ಲಾಸ್ -4 ರೋಗಗಳನ್ನು ಸರಿಯಾದ ಸುರಕ್ಷಾ ಪರಿಕರಗಳಿಲ್ಲದೇ ನಿರ್ವಹಿಸುತ್ತಿದ್ದು, ಅಪಾಯ ತಂದೊಡ್ಡುವಂತೆ ಇದೆ ಎಂದು ವರದಿ ಹೇಳಿದೆ. (ಏಜೆನ್ಸೀಸ್)