ತವಾಂಗ್​ ಗಿರಿ ಶಿಖರ 
ನ್ಯೂಸ್

Tawang Peak : ಅರುಣಾಚಲ ಗಡಿ ಶಿಖರಕ್ಕೆ ಧರ್ಮಗುರು ಹೆಸರಿಟ್ಟ ಭಾರತ.. ಚೀನಾ ಹೇಳಿದ್ದೇನು ಗೊತ್ತಾ?

ನವದೆಹಲಿ: ಭಾರತೀಯ ಪರ್ವತಾರೋಹಿಗಳ ಗುಂಪು ಇತ್ತೀಚೆಗೆ ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದ ಶಿಖರ(Tawang Peak)ವನ್ನು ಏರಿದ್ದು, ಅದಕ್ಕೆ ಬೌದ್ಧಗುರು 6 ನೇ ದಲೈ ಲಾಮಾ ಅವರ ಹೆಸರನ್ನು ಇಡಲಾಗಿದೆ. ಆದರೆ ಇದಕ್ಕೆ ನೆರೆಯ ರಾಷ್ಟ್ರ ಚೀನಾ ತೀವ್ರವಾಗಿ ಪ್ರತಿಕ್ರಿಯಿಸಿದೆ.

ಅರುಣಾಚಲ ಪ್ರದೇಶ ಚೀನಾಗೆ ಸೇರಿದ್ದು, ತಮ್ಮ ಪ್ರದೇಶವನ್ನು ಆಕ್ರಮಿಸಲಾಗಿದೆ ಎಂದು ಚೀನಾ ವಾದಿಸುತ್ತಲೇ ಬಂದಿದೆ. ಆದರೆ ಅದು ನಮ್ಮ ಅವಿಭಾಜ್ಯ ಭಾಗವೆಂದು ಭಾರತವೂ ಖಡಕ್​ ಆಗಿ ಹೇಳುತ್ತ ಬಂದಿದೆ. ಪರಿಸ್ಥಿತಿ ಹೀಗಿರುವಾಗ ರಕ್ಷಣಾ ಇಲಾಖೆಯ ಭಾಗವಾಗಿರುವ ದಿರಾಂಗ್‌ನಲ್ಲಿರುವ ರಾಷ್ಟ್ರೀಯ ಪರ್ವತಾರೋಹಣ ಮತ್ತು ಸಾಹಸ ಕ್ರೀಡೆಗಳ (ನಿಮಾಸ್) ನಿರ್ದೇಶಕ ಕರ್ನಲ್ ರಣವೀರ್ ಸಿಂಗ್ ಜೈಸ್ವಾಲ್ ನೇತೃತ್ವದ 15 ಆರೋಹಿಗಳ ತಂಡವು 15 ದಿನಗಳಲ್ಲಿ 6,383 ಮೀಟರ್ ಎತ್ತರವನ್ನು ಶನಿವಾರ(ಸೆ.21) ತವಾಂಗ್ ಪ್ರದೇಶದ ಶಿಖರ(Tawang Peak)ವನ್ನು ತಲುಪಿತ್ತು. ಆಗ ಈ ಶಿಖರಕ್ಕೆ ಬೌದ್ಧ ಗುರು ಆರನೇ ದಲೈ ಲಾಮಾ, ತವಾಂಗ್‌ನಲ್ಲಿ ಜನಿಸಿದ ಸಂಗ್ಯಾಂಗ್ ಗ್ಯಾಸ್ಟೋ (17ನೇ-18ನೇ ಶತಮಾನ) ಗೌರವಾರ್ಥವಾಗಿ ಸ್ಯಾಂಗ್ಯಾಂಗ್ ಗ್ಯಾಸ್ಟೋ ಪೀಕ್ ಎಂದು ಹೆಸರಿಸಲಾಯಿತು.

ಆದರೆ, ಇಂತಹ ಕೆಲಸಗಳಿಗೆ ಖ್ಯಾತೆ ತೆಗೆಯುವ ಚೀನಾ ಅರುಣಾಚಲ ಪ್ರದೇಶದ ಮೇಲೆ ತನ್ನ ಹಕ್ಕುಗಳನ್ನು ಕಳೆದುಕೊಳ್ಳುತ್ತಿರುವ ಭಾವನೆ ಹೊಂದಿ 'ಝಂಗ್ನಾನ್'(ಅರುಣಾಚಲ) ನಮ್ಮದೇ ಎಂದು ಮತ್ತೊಮ್ಮೆ ಹೇಳಿದೆ.

ಜಾಂಗ್ನಾನ್​ ನಮ್ಮದೇ: Tawang Peak

ಈ ವಿಚಾರವಾಗಿ ಭಾರತೀಯ ರಕ್ಷಣಾ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು, 6ನೇ ದಲೈ ಲಾಮಾ ಅವರ ಹೆಸರನ್ನು ಆಯ್ಕೆ ಮಾಡಿರುವುದು ಅವರ ಕಾಲಾತೀತ ಬುದ್ಧಿವಂತಿಕೆಗೆ ಮತ್ತು ಅದನ್ನು ಮೀರಿ ಮೊನ್ಪಾ ಸಮುದಾಯಕ್ಕೆ ನೀಡಿದ ಗೌರವವಾಗಿದೆ ಎಂದು ತಿಳಿಸಿದೆ. ಆದರೆ ಇದಕ್ಕೆ ಕೌಂಟರ್​ ಎಂಬಂತೆ ಬೀಜಿಂಗ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್, 'ನೀವು ಏನು ಉಲ್ಲೇಖಿಸುತ್ತಿದ್ದೀರಿ ಎಂದು ನನಗೆ ತಿಳಿದಿಲ್ಲ' “ಜಾಂಗ್ನಾನ್ ಪ್ರದೇಶವು ಚೀನಾದ ಪ್ರದೇಶವಾಗಿದೆ. ನಮ್ಮ ಭೂಪ್ರದೇಶವನ್ನು ಪ್ರವೇಶಿಸುವುದು ಕಾನೂನುಬಾಹಿರ. ಈ ವಿಚಾರದಲ್ಲಿ ಚೀನಾದ ನಿಲುವು ಸ್ಥಿರ' ಎಂದು ಸ್ಪಷ್ಟಪಡಿಸಿದ್ದಾರೆ.(Tawang Peak)