ನ್ಯೂಸ್

ಶಾಂತಿ ಮಂತ್ರ ಪಠನೆ ಆರಂಭಿಸಿದ ಚೀನಾ; ಎರಡೂ ರಾಷ್ಟ್ರಗಳಿಗೆ ಯುದ್ಧ ಇಷ್ಟವಿಲ್ಲ...

ನವದೆಹಲಿ: ಭಾರತ ಮತ್ತು ಚೀನಾಕ್ಕೆ ಪರಸ್ಪರರಿಂದ ಯಾವುದೇ ಅಪಾಯವಿಲ್ಲ. ಉಭಯ ರಾಷ್ಟ್ರಗಳಿಗೆ ಯುದ್ಧವೂ ಇಷ್ಟವಿಲ್ಲ ಎಂದು ಭಾರತದಲ್ಲಿನ ಚೀನಾದ ರಾಯಭಾರಿ ಸನ್​ ವಿಡಾಂಗ್​ ಹೇಳಿದ್ದಾರೆ. ಲಡಾಖ್​ ವಲಯದಲ್ಲಿನ ವಾಸ್ತವ ಗಡಿರೇಖೆಯ ಬಳಿ ಉಭಯ ರಾಷ್ಟ್ರಗಳ ನಡುವೆ ಉಂಟಾಗಿರುವ ಉದ್ವಿಗ್ನತೆ ಹಿನ್ನೆಲೆಯಲ್ಲಿ ಅವರು ಮಂಗಳವಾರ ಈ ವಿಷಯವನ್ನು ತಿಳಿಸಿದ್ದು, ಕೆಲ ವಿಷಯಗಳ ಬಗ್ಗೆ ಉಭಯ ರಾಷ್ಟ್ರಗಳಿಗೂ ಇರುವ ವ್ಯಾತ್ಯಾಸಗಳು ಎರಡೂ ರಾಷ್ಟ್ರಗಳ ಸಂಬಂಧವನ್ನು ಹದಗೆಡಿಸುವಂತೆ ಆಗಬಾರದು. ಮಾತುಕತೆ ಮೂಲಕ ಆ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಭಾರತ ಮತ್ತು ಚೀನಾಗಳೆರಡೂ ಕೋವಿಡ್​-19 ಪಿಡುಗಿನ ವಿರುದ್ಧ ಭಾರಿ ಹೋರಾಟ ಸಂಘಟಿಸಿವೆ. ಇದರ ವಿರುದ್ಧ ಹೋರಾಡುತ್ತಲೇ ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಸುಧಾರಿಸಿಕೊಂಡು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವ ಅವಶ್ಯಕತೆ ಇದೆ. ಚೀನಾ ಮತ್ತು ಭಾರತ ನಡುವಿನ ಉತ್ತಮ ಸಂಬಂಧದ ಮಹತ್ವವನ್ನು ನಮ್ಮ ಯುವಜನರು ಅರಿತುಕೊಳ್ಳಬೇಕು. ಉಭಯ ರಾಷ್ಟ್ರಗಳಲ್ಲೂ ಯುವಜನತೆಗೆ ಅವಕಾಶಗಳು ಹೆಚ್ಚಾಗಿವೆ. ಆದರೆ ಅವುಗಳೆಂದೂ ಪರಸ್ಪರರ ಪಾಲಿಗೆ ಭೀತಿಯಾಗಿಲ್ಲ ಎಂದು ಹೇಳಿದ್ದಾರೆ.

ಭಾರತದ ವಿದೇಶಾಂಗ ಸಚಿವಾಲಯ ಕೂಡ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದ ವಾತಾವರಣವನ್ನು ಹೊಂದುವುದು ಭಾರತದ ಬಯಕೆಯಾಗಿದೆ. ಭಾರತ-ಚೀನಾ ಸಂಬಂಧ ಸುಧಾರಣೆಯಲ್ಲಿ ಈ ವಿಷಯ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಭಾರತದಲ್ಲಿನ ಚೀನಾ ರಾಯಭಾರಿ ಕೂಡ ಶಾಂತಿ ಮಂತ್ರವನ್ನು ಪಠಿಸಿದ್ದಾರೆ.