ನ್ಯೂಸ್

ಶಸ್ತ್ರಚಿಕಿತ್ಸೆಗೆ ಒಳಗಾದ 82 ವರ್ಷದ ವೃದ್ಧೆಗೆ ಗುದ್ದು: ವೀಡಿಯೊ ವೈರಲ್ ನಂತರ ಚೀನಾ ವೈದ್ಯ ಅಮಾನತು!

Webdesk - Narayanaswamy

ಬೀಜಿಂಗ್​: ವೈದ್ಯ ನಾರಾಯಣೋ ಹರಿ ಎನ್ನುತ್ತಾರೆ. ಅಂದರೆ ವೈದ್ಯನ ಸೇವೆ ದೇವರ ಸಮನಾದದ್ದು. ಆದರೆ ರೋಗಿಯನ್ನು ಮುತುವರ್ಜಿಯಿಂದ ಕಾಣಬೇಕಾದ ವೈದ್ಯ ಶಸ್ತ್ರಚಿಕಿತ್ಸೆ ಸಂದರ್ಭದಲ್ಲೂ ಗುದ್ದಿದರೆ? ಹೌದು ಚೀನಾದಲ್ಲಿ ಇಂತಹ ಅಮಾನವೀಹ ಘಟನೆ ನಡೆದಿದೆ. ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 82 ವರ್ಷ ವಯಸ್ಸಾದ ವೃದ್ಧೆ ತಲೆಗೆ ಮೂರು ಬಾರಿ ವೈದ್ಯ ಗುದ್ದಿದ್ದು, ವೀಡಿಯೊ ವೈರಲ್ ಆಗಿದೆ. ಬಳಿಕ ಆತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಇಂತಹ ಆಘಾತಕಾರಿ ಘಟನೆ 2019 ರಲ್ಲಿ ಚೀನಾದ ಗೈಗಾಂಗ್‌ನಲ್ಲಿರುವ ಆಸ್ಪತ್ರೆಯಲ್ಲಿ ನಡೆದಿದೆ. ಸಂಪೂರ್ಣ ಘಟನೆ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಕರೋನಾ ಆರಂಭದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ವೈದ್ಯರ ಗುಂಪಿನಲ್ಲಿ ಒಬ್ಬರಾದ ಡಾ.ಐಫೆನ್ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡಿದ್ದರಿಂದ ವೈರಲ್ ಆಗಿದೆ.

ಇಷ್ಟಕ್ಕೂ ನಡೆದಿದ್ದೇನು?: ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 82 ವರ್ಷ ವಯಸ್ಸಾದ ವೃದ್ಧೆಗೆ ಅರಿವಳಿಕೆ ನೀಡಲಾಯಿತು, ಬಳಿಕ ಶಸ್ತ್ರಚಿಕಿತ್ಸೆ ಸಮಯದಲ್ಲಿ ಆಕೆಯ ತಲೆ ಮತ್ತು ಕಣ್ಣುಗುಡ್ಡೆಗಳನ್ನು ಚಲಿಸುತ್ತಲೇ ಇದ್ದಳು. ರೋಗಿಯು ಸ್ಥಳೀಯ ಉಪಭಾಷೆಯನ್ನು ಮಾತನಾಡುತ್ತಿದ್ದರಿಂದ ವೈದ್ಯರ ಎಚ್ಚರಿಕೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ವೈದ್ಯರು ಆಕೆ ತಲೆಗೆ ಮೂರು ಬಾರಿ ಗುದ್ದಿದ್ದಾರೆ.

ಇದನ್ನು ಕಂಡ ಆಸ್ಪತ್ರೆ ಆಡಳಿತ ಸಮರ್ಥಿಸಿಕೊಂಡಿದೆ. ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ರೋಗಿಯು ಶಸ್ತ್ರಚಿಕಿತ್ಸಾ ಅಸಹಿಷ್ಣುತೆಯನ್ನು ಹೊಂದಿದ್ದರು. ಆಕೆ ಕಣ್ಣುಗಳನ್ನು ಸ್ಪರ್ಶಿಸಲು ಪ್ರಯತ್ನಿಸಿದರು. ಕಣ್ಣುಗಳನ್ನು ಒಮ್ಮೆ ಸ್ಪರ್ಶಿಸಿದರೆ ಅದು ಸೋಂಕಿಗೆ ಕಾರಣವಾಗಬಹುದು. ಹೀಗಾಗಿ ವೈದ್ಯರು ಅಪಾಯವನ್ನು ತಪ್ಪಿಸಲು ಹೀಗೆ ಮಾಡಿದ್ದಾರೆ ಎಂದು ಹೇಳಿತ್ತು.

ಆದರೆ ವೈದ್ಯ ಜೋರಾಗಿ ತಲೆಗೆ ಗುದ್ದಿದ್ದರಿಂದ ಮಹಿಳೆಯ ಹಣೆಯ ಮೇಲೆ ಮೂಗೇಟುಗಳು ಉಂಟಾಗಿವೆ. ಹೀಗಾಗಿ ಇದು ಅಮಾನವೀಯ ಕೃತ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆರೋಪಿಸುತ್ತಿದ್ದಾರೆ. ವಯಸ್ಸಾದ ರೋಗಿ ಮೇಲೆ ವೈದ್ಯರ ಅಮಾನವೀಯ ಸವಾರಿ ಎಂದು ಆನ್‌ಲೈನ್‌ನಲ್ಲಿ ಭಾರಿ ಆಕ್ರೋಶ ವ್ಯಕ್ತಯಾಗಿದೆ. ಇದಾದ ಬಳಿಕ ಆಸ್ಪತ್ರೆ ಆಡಳಿತ ಶಸ್ತ್ರಚಿಕಿತ್ಸಕನನ್ನು ಅಮಾನತುಗೊಳಿಸಿದೆ. ಈ ವಾರ ಆಸ್ಪತ್ರೆಯ ಸಿಇಒ ಅವರನ್ನು ಸಹ ವಜಾಗೊಳಿಸಿದೆ.

ಕ್ಷಮೆ ಯಾಚಿಸಿದ ಆಸ್ಪತ್ರೆ: ವೃದ್ಧೆಯ ಕ್ಷಮೆಯಾಚಿಸಿದ ಆಸ್ಪತ್ರೆ ಆಡಳಿತ ಆಕೆಗೆ 500 ಯುವಾನ್ ಅಥವಾ 5,800 ಪರಿಹಾರವನ್ನು ನೀಡಿದೆ. ಆದರೆ ಮಹಿಳೆಯ ಮಗ ಆಕೆ ಎಡಕಣ್ಣು ಕಳೆದುಕೊಂಡು ಕುರುಡಾಗಿದ್ದಾಳೆ ಎಂದು ಆರೋಪಿಸಿದ್ದಾನೆ.