ನ್ಯೂಸ್

ಕೊರೊನಾ ಮಹಾಮಾರಿಗೆ ಒಂದೇ ದಿನ 103 ಮಂದಿ ಬಲಿ: ಸಾವಿರ ದಾಟಿದ ಸಾವಿನ ಸಂಖ್ಯೆ, ಚೀನಾಕ್ಕೆ ವಿಶ್ವ ಆರೋಗ್ಯ ಸಂಸ್ಥೆ ತಂಡ ಭೇಟಿ

ಬೀಜಿಂಗ್: ಕರೊನಾ ವೈರಸ್ ತೀವ್ರವಾಗಿ ಬಾಧಿಸಿರುವ ಹುಬೇ ಪ್ರಾಂತ್ಯದಲ್ಲಿ ಮಂಗಳವಾರ 103 ಜನರು ಮೃತಪಟ್ಟಿದ್ದು, ಚೀನಾದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ಒಂದು ಸಾವಿರ ದಾಟಿದೆ. ಇದುವರೆಗೆ ಒಟ್ಟು 1,016 ಜನರು ಬಲಿಯಾಗಿದ್ದಾರೆಂದು ಹುಬೇ ಆರೋಗ್ಯ ಆಯೋಗ ತಿಳಿಸಿದೆ. ಸೋಂಕು ತಗುಲಿರುವ 2,097 ಹೊಸ ಪ್ರಕರಣ ವರದಿಯಾಗಿವೆ.

ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಸೋಮವಾರ ಬೀಜಿಂಗ್​ನ ಆಸ್ಪತ್ರೆಯೊಂದಕ್ಕೆ ತೆರಳಿ ಕರೊನಾ ಪೀಡಿತರು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಭೇಟಿ ಮಾಡಿದರು. ಸೋಂಕು ವ್ಯಾಪಿಸುವುದನ್ನು ತಡೆಯಲು ಇನ್ನಷ್ಟು ದೃಢವಾದ ನಿರ್ಣಾಯಕ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಸೂಚಿಸಿದರೆಂದು ಸರ್ಕಾರಿ ಸುದ್ದಿವಾಹಿನಿ ವರದಿ ಮಾಡಿದೆ.

ಡಬ್ಲ್ಯೂಎಚ್​ಒ ತಂಡ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ) ನೇತೃತ್ವದ ವೈರಸ್ ತಜ್ಞರ ಅಂತಾರಾಷ್ಟ್ರೀಯ ತಂಡವೊಂದು ಚೀನಾಕ್ಕೆ ಆಗಮಿಸಿದೆ. 2014-16ರಲ್ಲಿ ಪಶ್ಚಿಮ ಏಷ್ಯಾದಲ್ಲಿ ಎಬೊಲಾ ಸಾಂಕ್ರಾಮಿಕ ರೋಗ ಉಲ್ಬಣಿಸಿದ್ದಾಗ ಅದನ್ನು ನಿರ್ವಹಿಸಿದ್ದ ಡಬ್ಲ್ಯೂಎಚ್​ಒ ನಿಯೋಗದ ಮುಖ್ಯಸ್ಥ ಬ್ರೂಸ್ ಏಲ್​ವರ್ಡ್ ಈ ತಂಡದ ಮುಖ್ಯಸ್ಥರಾಗಿದ್ದಾರೆ. ಕರೊನಾ ಜಾಗತಿಕ ತುರ್ತು ಆರೋಗ್ಯ ಸಮಸ್ಯೆ ಎಂದು ಡಬ್ಲ್ಯೂಎಚ್​ಒ ಇತ್ತೀಚೆಗೆ ಘೋಷಿಸಿದೆ.

ಹೆಚ್ಚಿದ ಕಳವಳ: ಚೀನಾಕ್ಕೆ ಭೇಟಿ ನೀಡದ ಜನರಲ್ಲೂ ಕರೊನಾ ಸೋಂಕು ಕಂಡು ಬಂದಿರುವುದು ಕಳವಳಕ್ಕೆ ಕಾರಣವಾಗಿದೆ ಎಂದು ಡಬ್ಲ್ಯೂಎಚ್​ಒ ಮುಖ್ಯಸ್ಥ ಟೆಡ್ರೋಸ್ ಅಧ್​ನಾಮ್ ಘಬ್ರೆಯೆಸಿಸ್ ಹೇಳಿದ್ದಾರೆ. ಬ್ರಿಟನ್​ನಲ್ಲಿ ಸೋಂಕಿತರ ಸಂಖ್ಯೆ ಎಂಟಕ್ಕೇರಿದ್ದು, ಇದು ನಿಜಕ್ಕೂ ‘ಗಂಭೀರ ಅಪಾಯ ಒಡ್ಡುವಂಥದ್ದಾಗಿದೆ’ ಎಂದು ಸರ್ಕಾರ ಎಚ್ಚರಿಸಿದೆ.

ಬಿಸಿ ವಾತಾವರಣದಿಂದಾಗಿ ಏಪ್ರಿಲ್​ನಲ್ಲಿ ಕರೊನಾ ಸೋಂಕು ಮಾಯವಾಗಬಹುದು ಎಂಬುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರೀಕ್ಷೆಯಾಗಿದೆ. ಆದರೆ ಇದು ಆರೋಗ್ಯ ಅಧಿಕಾರಿಗಳ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿದೆ. ವೈರಸ್ ಭೀತಿಯಿಂದಾಗಿ ಜಪಾನ್ ಸಮುದ್ರದಲ್ಲಿ ತಡೆಹಿಡಿಯಲಾಗಿರುವ ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿರುವ 138 ಭಾರತೀಯರೊಂದಿಗೆ ಸಂಪರ್ಕದಲ್ಲಿರುವುದಾಗಿ ಟೋಕಿಯೋದಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಯುಎಇಯಲ್ಲಿ ಭಾರತೀಯನಿಗೆ ಸೋಂಕು: ಅರಬ್ ಸಂಯುಕ್ತ ಸಂಸ್ಥಾನದಲ್ಲಿ (ಯುಎಇ) ಒಬ್ಬ ಭಾರತೀಯ ಕರೊನಾ ಸೋಂಕಿನಿಂದ ಬಳಲುತ್ತಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ ಎಂಟಕ್ಕೇರಿದೆ. ಕಳೆದ ವಾರ ವುಹಾನ್​ನಿಂದ ಪ್ರವಾಸಕ್ಕಾಗಿ ಬಂದಿದ್ದ ಚೀನಿಯರ ಕುಟುಂಬದ ನಾಲ್ವರಿಗೂ ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಕರೊನಾಕ್ಕೆ ಹಾಂಗ್​ಕಾಂಗ್ ಮತ್ತು ಫಿಲಿಪ್ಪೀನ್ಸ್​ನಲ್ಲಿ ಕೂಡ ಇಬ್ಬರು ಬಲಿಯಾಗಿದ್ದಾರೆ. ಭಾರತ, ಜರ್ಮನಿ, ಬ್ರಿಟನ್, ಇಟಲಿ, ಫ್ರಾನ್ಸ್, ರಷ್ಯಾ, ಬೆಲ್ಜಿಯಂ, ಸ್ವೀಡನ್, ಫಿನ್​ಲ್ಯಾಂಡ್, ಸಿಂಗಾಪುರ ಮತ್ತು ಸ್ಪೇನ್​ನಲ್ಲಿಯೂ ಕರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.

ಬನಾರಸ್ ಸೀರೆಗೂ ಆತಂಕ!

ಕರೊನಾ ಸೋಂಕು ಬನಾರಸ್ ಸೀರೆ ಉದ್ಯಮಕ್ಕೂ ಕಂಟಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಾಣಸಿ ಲೋಕಸಭಾ ಕ್ಷೇತ್ರ ಬನಾರಸ್ ಸೀರೆ ಉದ್ಯಮದ ಕೇಂದ್ರ ಸ್ಥಾನ. ಸುಮಾರು 4.5 ಲಕ್ಷ ಜನರಿಗೆ ಅನ್ನ ಕೊಡುವ ಈ ಪ್ರಮುಖ ಕೈಗಾರಿಕೆ ಈಗ ಕರೊನಾ ಕಾರಣದಿಂದ ಆತಂಕ ಎದುರಿಸುತ್ತಿದೆ. ಬನಾರಸ್ ಸೀರೆ ಜತೆಗೆ ಇಲ್ಲಿನ ರೇಷ್ಮೆಯ ಡ್ರೆಸ್ ಮೆಟೀರಿಯಲ್​ಗಳಿಗೂ ಅಪಾರ ಬೇಡಿಕೆಯಿದೆ. ಈ ಬಟ್ಟೆ ತಯಾರಿಕೆಯಲ್ಲಿ ಬಳಕೆಯಾಗುವುದು ಚೀನಾ ರೇಷ್ಮೆ. ಚೀನಾದಿಂದ ಅದನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ ಕರೊನಾ ಉಲ್ಬಣಗೊಂಡ ಬಳಿಕ ಚೀನಾದಿಂದ ರೇಷ್ಮೆ ಬಂದಿಲ್ಲ. ಇದು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ನಾಲ್ಕೂವರೆ ಲಕ್ಷ ಉದ್ಯಮಿಗಳು ಹಾಗೂ ಕಾರ್ವಿುಕರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಚೀನಾ ಮುನ್ನೆಚ್ಚರಿಕೆ ಕ್ರಮವಾಗಿ ಯಾವ ದೇಶಕ್ಕೂ ಸಾಮಗ್ರಿಯನ್ನು ರಫ್ತು ಮಾಡುತ್ತಿಲ್ಲ. ಇದು ಬನಾರಸ್ ಸೀರೆ ಉದ್ಯಮದ ಚಟುವಟಿಕೆ ಗಳು ಸ್ಥಗಿತಗೊಳ್ಳುವಂತೆ ಮಾಡುವ ಸಾಧ್ಯತೆ ಹೆಚ್ಚಿದೆ.

1. ವಾರಾಣಸಿಯಲ್ಲಿ ಕಾರ್ಯನಿರ್ವಹಿಸುವ ಕೈಮಗ್ಗ, ಅರೆ ಕೈಮಗ್ಗ ಹಾಗೂ ಪವರ್​ಲೂಮ್ಳ ಸಂಖ್ಯೆ 80,000ಕ್ಕೂ ಹೆಚ್ಚು.

2. ಇವುಗಳಲ್ಲಿ ದುಡಿಯುವ ಕಾರ್ವಿುಕರ ಸಂಖ್ಯೆ 4.5 ಲಕ್ಷಕ್ಕೂ ಅಧಿಕ.

3. ಸೀರೆ ಉದ್ಯಮದಲ್ಲೇ ದೈನಿಕ ಬಳಕೆ ಆಗುವ ಚೀನಾ ರೇಷ್ಮೆ ಪ್ರಮಾಣ 7ರಿಂದ 8 ಟನ್.

ಕರಾವಳಿ ಯುವಕರು ಮನೆಗೆ

ಮಂಗಳೂರು: ಕರೊನಾ ಭೀತಿಯಿಂದ ಹಾಂಕಾಂಗ್​ನಲ್ಲಿ ಒಂದು ವಾರ ಕಾಲ ತಡೆಹಿಡಿಯಲ್ಪಟ್ಟ ಚೀನಾ ಮಾಲೀಕತ್ವದ ಹಡಗಿನಲ್ಲಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರು ಸೋಮವಾರ ಬಿಡುಗಡೆಗೊಂಡಿದ್ದು, ಹಡಗಿನ ಸಿಬ್ಬಂದಿಯಾಗಿದ್ದ ಮಂಗಳೂರಿನ ಗೌರವ್ ಹಾಗೂ ಕಾಸರಗೋಡು ಜಿಲ್ಲೆಯ ಓರ್ವ ಯುವಕ ಮಂಗಳವಾರ ಮನೆ ತಲುಪಿದ್ದಾರೆ. ಹಾಂಕಾಂಗ್​ನಿಂದ ಮುಂಬೈ ಮತ್ತು ಅಲ್ಲಿಂದ ಮಂಗಳೂರಿಗೆ ಸಂಪರ್ಕ ವಿಮಾನ ವ್ಯವಸ್ಥೆ ತಕ್ಷಣ ಒದಗಿರುವ ಹಿನ್ನೆಲೆ ಒಂದೇ ದಿನ ಊರು ತಲುಪಲು ಸಾಧ್ಯವಾಗಿದೆ ಎಂದು ಅವರ ಕುಟುಂಬದ ಮೂಲ ತಿಳಿಸಿದೆ. ಇವರ ಪೈಕಿ ಫೆ.10ರಂದು ನಡೆಯಬೇಕಿದ್ದ ಗೌರವ್ ವಿವಾಹ ಮುಂದೂಡಿಕೆಯಾಗಿದೆ. ಕಾಸರಗೋಡು ಯುವಕನ ಮದುವೆ ಫೆ.16ರಂದು ಪುತ್ತೂರಿನಲ್ಲಿ ನಿಗದಿಯಾಗಿದೆ.