ನವದೆಹಲಿ: ಗಡಿ ವಿವಾದ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಚೀನಾದ ಜತೆ ಮಾತುಕತೆ ಜಾರಿಯಲ್ಲಿದೆ. ಆದರೆ ವಿವಾದ ಎಷ್ಟರಮಟ್ಟಿಗೆ ಪರಿಹಾರವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ನಮ್ಮಿಂದ ಒಂದಿಂಚು ಭೂಮಿಯನ್ನೂ ಅವರಿಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅವರು ಶುಕ್ರವಾರ ಲೇಹ್ಗೆ ಒಂದು ದಿನದ ಭೇಟಿಗಾಗಿ ಆಗಮಿಸಿದ್ದು, ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಲ್ಲಿನ ಭದ್ರತಾ ನಿಯೋಜನೆಗಳು ಕುರಿತು ಸಮಗ್ರ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಅನವಶ್ಯಕವಾಗಿ ಸಂಚರಿಸಿದರೆ ಕೇಸ್, ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಎಚ್ಚರಿಕೆ, ವಿವಿಧೆಡೆ ಲಾಕ್ಡೌನ್ ನಿಯಮ ಪರಿಶೀಲನೆ
ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾಪಡೆ ಮುಖ್ಯಸ್ಥ ಜನರಲ್ ಎಂ.ಎಂ. ನರವಾನೆ ರಕ್ಷಣಾ ಸಚಿವರಿಗೆ ಸಾಥ್ ನೀಡುತ್ತಿದ್ದಾರೆ. ಇವರೆಲ್ಲರೂ ಲುಕುಂಗ್ ಮತ್ತು ಸ್ಟಕ್ನಾದಲ್ಲಿರುವ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಲಿದ್ದಾರೆ.
ಮಾತುಕತೆ ಮೂಲಕವೇ ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾದರೆ, ಅದಕ್ಕಿಂತ ಸಂತೋಷದ ಕ್ಷಣ ಮತ್ತೊಂದಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಜು.3ರಂದು ಲಡಾಖ್ಗೆ ಅಚ್ಚರಿಯ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಮುಂಚೂಣಿ ನೆಲೆಗಳಲ್ಲಿ ನಿಯೋಜನೆಗೊಂಡಿರುವ ಯೋಧರನ್ನು ಉದ್ದೇಶಿಸಿ ಮಾತನಾಡಿದ್ದರು. ಅಲ್ಲದೆ, ಭಾರತ-ಚೀನಾ ಗಡಿ ವಿವಾದವನ್ನು ಇತ್ಯರ್ಥ ಪಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದೀಗ ಲಡಾಖ್ಗೆ ಭೇಟಿ ನೀಡುತ್ತಿದ್ದಾರೆ.