ನ್ಯೂಸ್

ಕತ್ತಲಲ್ಲಿ ಕಲ್ಲು ತೂರಾಟ ಮಾಡಿದ ವಂಚಕ ಚೀನಿ ಯೋಧರು

ನವದೆಹಲಿ: ದಟ್ಟ ಕತ್ತಲು ಆವರಿಸಿದ್ದ ಸಂದರ್ಭದಲ್ಲಿ ಚೀನಿ ಯೋಧರು ಕಲ್ಲುಗಳನ್ನು ತೂರಿ ದಾಳಿ ಮಾಡಿದರು ಎಂದು ಹೇಳಲಾಗಿದೆ.

ಚೀನಿಯರು ಸಶಸ್ತ್ರ ದಾಳಿ ಮಾಡಿಲ್ಲ. ಬದಲಿಗೆ ಕಲ್ಲು ತೂರಾಟ ಮಾಡಿದ್ದಾರೆ. ತಮ್ಮ ಪಡೆಯ ನೇತೃತ್ವ ವಹಿಸಿದ್ದ ಕರ್ನಲ್​ ಯೋಧರಿಗೆ ಸೂಚನೆಗಳನ್ನು ನೀಡುತ್ತಿರುವ ಸಂದರ್ಭದಲ್ಲಿ ಕಲ್ಲು ಬಡಿದು ಹುತಾತ್ಮರಾದರು. ಇವರಂತೆ ಇಬ್ಬರು ಯೋಧರು ಕೂಡ ಕಲ್ಲು ಬಡಿದು ಹುತಾತ್ಮರಾದರು ಎಂದು ಭಾರತೀಯ ಸೇನಾಪಡೆ ಮೂಲಗಳು ತಿಳಿಸಿವೆ.

1975ರ ನಂತರದಲ್ಲಿ ಅರುಣಾಚಲಪ್ರದೇಶದಲ್ಲಿ ಪಹರೆಯಲ್ಲಿ ತೊಡಗಿದ್ದ ಭಾರತೀಯ ಯೋಧರನ್ನು ಸುತ್ತುವರಿದು, ಚೀನಿಯರು ಹತ್ಯೆ ಮಾಡಿದ ನಂತರದಲ್ಲಿ ಸಂಭವಿಸಿರುವ ಮೊದಲ ಹತ್ಯ ಇದಾಗಿದೆ.

ಕಲ್ಲಿನ ದಾಳಿ ಇದೇ ಮೊದಲಲ್ಲ: ಚೀನಿಯರು ಕಲ್ಲುಗಳನ್ನು ತೂರಿ ದಾಳಿ ಮಾಡುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಅವರು ಸಾಕಷ್ಟು ಬಾರಿ ಹೀಗೆ ಮಾಡಿದ್ದರು. ಸದ್ಯದ ಲಡಾಖ್​ ಬಿಕ್ಕಟ್ಟಿಗೆ ಕೂಡ ಮೇ 5-6ರಂದು ಲಡಾಖ್​ನ ಪೂರ್ವ ಭಾಗದಲ್ಲಿ ಚೀನಿಯರು ಕಲ್ಲು ತೂರಾಟ ಮಾಡಿದ್ದು, ಮುಳ್ಳುತಂತಿ ಸುತ್ತಿದ್ದ ಬಡಿಗೆಗಳಿಂದ ಭಾರತೀಯ ಯೋಧರ ಮೇಲೆ ಹಲ್ಲೆ ಮಾಡಿದ್ದು ಕಾರಣ.