ಸೊರಬ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಲ್ಲಿನ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ ಎಂದು ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ನಿರ್ದೇಶಕ ಗಣಪತಿ ಎಚ್. ಹುಲ್ತಿಕೊಪ್ಪ ಹೇಳಿದರು.
ತಾಲೂಕಿನ ಕಡಸೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹೊಸಬಾಳೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆಸರೇ ಸೂಚಿಸುವಂತೆ ಪ್ರತಿಭೆ ಕಾರಂಜಿಯಂತೆ ಚಿಮ್ಮಬೇಕು. ಮಕ್ಕಳ ಪ್ರತಿಭೆಗೆ ಎಲ್ಲರೂ ಪ್ರೋತ್ಸಾಹ ಮತ್ತು ಪ್ರೇರಣೆ ನೀಡಬೇಕು. ಆಸ್ತಿ, ಆಭರಣ ಎಂದೂ ಶಾಶ್ವತವಲ್ಲ. ಶಿಕ್ಷಣ ಮಾತ್ರ ಎಂದಿಗೂ ಪ್ರಜ್ವಲಿಸುತ್ತದೆ. ಬಡ ಮಕ್ಕಳಿಗೂ ದ್ವಿಭಾಷೆಯಲ್ಲಿ ಶಿಕ್ಷಣ ದೊರೆಯಬೇಕು ಎಂದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಜಯಶೀಲ ಗೌಡ ಮಾತನಾಡಿ, ವಿದ್ಯಾರ್ಥಿಗಳು ಪ್ರತಿಭೆ ಮೂಲಕ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಶಿಕ್ಷಣ ಅಷ್ಟೇ ಅಲ್ಲ ಕ್ರೀಡೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಹೇಳಿದರು.
ಶಾಲಾ ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷ ಸುಧಾಕರ ಪಿ. ನಾಯ್ಕ ಮಾತನಾಡಿ, ಸಮಾಜದಲ್ಲಿ ಉತ್ತಮ ಜೀವನಕ್ಕಾಗಿ ಅನೇಕರು ಹೋರಾಟ ಮಾಡುತ್ತಾರೆ. ಆದರೆ ಮಕ್ಕಳಿಗೆ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ದಯಾನಂದ ಕಲ್ಲೇರ ಮಾತನಾಡಿ, ಶಿಕ್ಷಣ ಎಂದರೆ ಕೇವಲ ಓದು, ಬರಹ ಅಲ್ಲ. ಮಗುವಿನಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ಪ್ರಕ್ರಿಯೆ. ಮಗುವಿಗೆ ಪ್ರೋತ್ಸಾಹ ಮತ್ತು ಪ್ರೇರಣೆ ಅಗತ್ಯ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಕೆ.ಮಹೇಶ್, ಸತ್ಯನಾರಾಯಣ, ಶಿವಕುಮಾರ್, ಇಸಿಒಗಳಾದ ಸಂಜೀವ್ಕುಮಾರ್, ಅರುಣ್ಕುಮಾರ್, ಮಂಜಪ್ಪ, ಮಂಜುನಾಥ್, ಸೋಮಪ್ಪ, ಹರಿಹರ ಹೆಗಡೆ, ಗುರುರಾಜ್, ಸುರೇಶ್, ಶಿಲ್ಪಾ, ಪವಿತ್ರಾ, ಮುಖ್ಯ ಶಿಕ್ಷಕ ರಮೇಶ್, ಕೆರಿಯಪ್ಪ ಇತರರಿದ್ದರು.