ನ್ಯೂಸ್

ಗುರಿ ಇಟ್ಟುಕೊಂಡು ಕನಸು ಕಂಡರೆ ಸಾಧಕರಾಗಲು ಸಾಧ್ಯ: ಡಿಸಿಎಂ ಡಿಕೆಶಿ

Bengaluru - Political - Shivananda Tagadur

ಬೆಂಗಳೂರು:

ಗುರಿ ಇಟ್ಟುಕೊಂಡು ಕನಸನ್ನು ಕಂಡರೆ ಮಾತ್ರ ನೀವು ಸಾಧಕರಾಗಲು ಸಾಧ್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.

ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಜಯಂತಿ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ವಿಧಾನಸೌಧದಲ್ಲಿ ನಡೆದ ಬೆಂಗಳೂರು ನಗರ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಮಕ್ಕಳ ಜತೆಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೀವನದಲ್ಲಿ ತ್ಯಾಗ ಹಾಗೂ ಶ್ರದ್ಧೆ ಇರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ಕುಳಿತಲ್ಲಿಯೇ ಕುಳಿತು ಕನಸು ಕಂಡರೆ ಪ್ರಯೋಜನವಿಲ್ಲ, ಅದಕ್ಕೆ ಪ್ರಯತ್ನ ಪಡಬೇಕು ಎಂದು

ನಿಮ್ಮ ಪೋಷಕರು, ವ್ಯಕ್ತಿತ್ವ ಬೆಳೆಸಿದ ಶಿಕ್ಷಕರನ್ನು ಮರೆಯಬಾರದು. ಯಾವುದನ್ನು ಬೇಕಾದರೂ ಬದಲಿಯಾಗಿ ಪಡೆಯಬಹುದು. ಪೋಷಕರು ಮತ್ತು ಶಿಕ್ಷಕರನ್ನು ಬದಲಿಯಾಗಿ ಪಡೆಯಲು ಸಾಧ್ಯವಿಲ್ಲ ಎಂದರು.

ನೀವು ಸಹ ಮುಂದಿನ ದಿನಗಳಲ್ಲಿ ವಿಧಾನಸೌಧದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸುವ, ಅತ್ಯುನ್ನತ ಅಧಿಕಾರಿಗಳಾಗಿ, ನಮ್ಮಂತೆಯೂ ಬೆಳೆಯಿರಿ ಎಂದರು.

ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಯಾರು ಯಾವ ಸಾಧನೆಯನ್ನು ಬೇಕಾದರೂ ಮಾಡಬಹುದು. ಮೊಬೈಲ್ ನಿಂದಲೇ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದು. ಸಿಕ್ಕಂತಹ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಿರಿ ಎಂದು ಕಿವಿಮಾತು ಹೇಳಿದರು.

ನೆಹರು ಪಾತ್ರ ಮುಖ್ಯವಾದದ್ದು:

ದೇಶಕ್ಕೆ ಅಡಿಪಾಯವನ್ನು ಕಟ್ಟಿದವರಲ್ಲಿ ನೆಹರೂ ಅವರ ಪಾತ್ರ ಮುಖ್ಯವಿದೆ. ನಮ್ಮ ರಾಜ್ಯ ಹಾಗೂ ದೇಶದಲ್ಲಿ ಅನೇಕ ಸಾಕ್ಷಿ ಗುಡ್ಡಗಳನ್ನು ನಿರ್ಮಾಣ ಮಾಡಿ ಹೋಗಿದ್ದಾರೆ. ಹಲವಾರು ಸಾರ್ವಜನಿಕ ಉದ್ದಿಮೆಯನ್ನು ಸ್ಥಾಪಿಸಿದ್ದಾರೆ. ಹೆಚ್‌ಎಂಟಿ, ಬಿಇಎಲ್, ಬಿಇಎಂಎಲ್ ಕಾರ್ಖಾನೆಗಳನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು ಎಂದು ಹೇಳಿದರು.

ಸಾಧನೆಗಳಿಗೆ ಸ್ಪೂರ್ತಿ:

ಶಿಕ್ಷಣ, ಆರೋಗ್ಯ, ಆಡಳಿತದಲ್ಲಿ ಸಾಕಷ್ಟು ಪ್ರಗತಿ ಸಾದಿಸಿದ್ದೇವೆ. ಮಂಗಳಯಾನ ಚಂದ್ರಯಾನಕ್ಕೆ ಇಸ್ರೋ ಸಂಸ್ಥೆಯವರು ಬೆಂಗಳೂರಲ್ಲಿ ಉಪಗ್ರಹಗಳನ್ನು ತಯಾರು ಮಾಡುತ್ತಾರೆ. ದೇಶದಲ್ಲಿ ಅತ್ಯಂತ ಹೆಚ್ಚು ವೈದ್ಯರು, ಶುಶ್ರೂಷಕಿಯರು, ಇಂಜಿನಿಯರ್‌ಗಳು, ವಿಜ್ಞಾನಿಗಳು ಕರ್ನಾಟಕದಿಂದ ಹೊರಹೊಮ್ಮುತ್ತಿದ್ದಾರೆ. ಇದು ನಿಮ್ಮ ಸಾಧನೆಗಳಿಗೆ ಸ್ಪೂರ್ತಿ ಆಗಬೇಕು ಎಂದರು.

ವಿಶೇಷ ಶಕ್ತಿ ಸ್ಥಳ:

ನೀವು ವಿಶೇಷವಾದ ಶಕ್ತಿ ಸ್ಥಳದಲ್ಲಿ ಕುಳಿತಿದ್ದೀರಿ. ಇಲ್ಲಿ ನ್ಯಾಯಾಂಗ ಮತ್ತು ಶಾಸಕಾಂಗ ಮುಖಾಮುಖಿಯಾಗಿವೆ. ಹೈಕೋರ್ಟಿನ ಮುಂಭಾಗ ವಿಧಾನಸೌಧವಿದೆ. ಇಡೀ ಜಗತ್ತಿನಲ್ಲಿಯೇ ಈ ರೀತಿಯ ಸಂಗತಿ ಎಲ್ಲೂ ಕಾಣಿಸಲು ಸಾಧ್ಯವಿಲ್ಲ. ಈ ಸ್ಥಳ ನಿಮಗೆ ಸ್ಪೂರ್ತಿಯಾಗಬೇಕು ಎಂದರು.

ಹೈಕೋರ್ಟ್‌ನಲ್ಲಿ (ಅಠಾರ ಕಚೇರಿ) ಜನಪ್ರತಿನಿಧಿಗಳ ಸಭೆ ಅಲ್ಲಿ ಚಿಕ್ಕದಾಗಿ ನಡೆಯುತ್ತಿತ್ತು. ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿದ ಮೇಲೆ ಇಲ್ಲಿ ನಡೆಯಲು ಪ್ರಾರಂಭವಾಯಿತು. ವಿಧಾನಸೌಧದ ಬಲಭಾಗದಲ್ಲಿ ವಿಕಾಸ ಸೌಧವನ್ನು ಕಟ್ಟಲಾಗಿದೆ. ಅಲ್ಲಿಂದಲೂ ಮಂತ್ರಿಗಳು ಹಾಗೂ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. ಎಡಭಾಗಕ್ಕೆ ರಾಜಭವನವಿದೆ. ಅಲ್ಲಿ ರಾಜ್ಯಪಾಲರ ಮನೆ ಹಾಗೂ ಕಚೇರಿಯಿದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳ ಮಧ್ಯೆ ನೀವು ಈ ಬಾರಿಯ ಮಕ್ಕಳ ದಿನವನ್ನು ಆಚರಿಸುತ್ತಾ ಇರುವಿರಿ. ನಿಮ್ಮ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮ ಎಂದರು