ವಂಶಿಕ್ ಪ್ರಭು 
ನ್ಯೂಸ್

11ಕ್ಕೆ ಮಕ್ಕಳ ಸಾಹಿತ್ಯ ಸಮ್ಮೇಳನ

ತೀರ್ಥಹಳ್ಳಿ: ತಾಲೂಕು 8ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ.11ರಂದು ಬೆಳಗ್ಗೆ 9.30ಕ್ಕೆ ಕಟ್ಟೇಹಕ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದು, ಸರ್ವಾಧ್ಯಕ್ಷರಾಗಿ ಹೊದಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಎಚ್.ವಿ.ವಂಶಿಕ್ ಪ್ರಭು ಆಯ್ಕೆಯಾಗಿದ್ದಾರೆ.

ತಾಲೂಕು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಶಿಕ್ಷಣ ಇಲಾಖೆ, ತಾಲೂಕು ಜಾನಪದ ಪರಿಷತ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ಹೊದಲದ ವಿಶ್ವನಾಥ ಪ್ರಭು ಹಾಗೂ ಅನುಶ್ರೀ ಅವರ ಪುತ್ರನಾದ ವಂಶಿಕ್ ಬರವಣಿಗೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾನೆ. ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲೂ ಪ್ರಥಮ, ಗ್ರಾಪಂನ ಗ್ರಂಥಾಲಯ ವತಿಯಿಂದ ಜರುಗಿದ ಪ್ರಬಂಧ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಪಡೆದಿದ್ದಾನೆ. ಪ್ರತಿಭಾವಂತ ಕ್ರೀಡಾಪಟು ಕಟ್ಟೇಹಕ್ಲು ಸಕಾರಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಎನ್.ಎಂ.ಮಾನ್ಯ ಕಾರ್ಯಕ್ರಮ ಉದ್ಘಾಟಿಸುವರು.

ಸಾಲ್ಗಡಿ ಗ್ರಾಪಂ ಅಧ್ಯಕ್ಷೆ ಮಮತಾ ಉಮೇಶ್, ಬಿಇಒ ವೈ.ಗಣೇಶ್, ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ತಾಲೂಕು ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ತಾಲೂಕು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ರೇಣುಕಾ ಎಂ. ಹೆಗಡೆ, ಶಾಲಾಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಕಾಶ್ ನಾಯ್ಕ, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎ.ಜಿ.ಶ್ರೀಧರ್, ಮುಖ್ಯ ಶಿಕ್ಷಕಿ ಶ್ರೀದೇವಿ ಶೇಡ್ಗಾರ್, ತಾಲೂಕು ಜಾನಪದ ಪರಿಷತ್ ಅಧ್ಯಕ್ಷೆ ಲೀಲಾವತಿ ಜಯಶೀಲ್ ಭಾಗವಹಿಸುವರು.