ಕುಷ್ಟಗಿಯ 1ನೇ ವಾರ್ಡ್ ನ ಶರೀಫ್ ನಗರದ ಹೊರನೋಟ. 
ನ್ಯೂಸ್

ಮಕ್ಕಳ ಭವಿಷ್ಯ ಅತಂತ್ರ- ಶಾಲೆ ಕಳೆದುಕೊಳ್ಳುವ ಭೀತಿಯಲ್ಲಿ ಅಲೆಮಾರಿ ಜನಾಂಗ

ಕುಷ್ಟಗಿ: ಅಲೆಮಾರಿ ಬುಡಕಟ್ಟು ಜನಾಂಗ ವಾಸಿಸುವ ಪಟ್ಟಣದ ಒಂದನೇ ವಾರ್ಡ್‌ನ ಶರೀಫ್ ನಗರ ಪುರಸಭೆ ನಿರ್ಲಕ್ಷ್ಯಕ್ಕೊಳಗಾಗಿದೆ. ಮೂಲ ಸೌಕರ್ಯ ವಂಚಿತ ಕಾಲನಿಯ ನಿವಾಸಿಗಳಿಗೆ ಸರ್ಕಾರಿ ಶಾಲೆ ಕಳೆದುಕೊಳ್ಳುವ ಭೀತಿ ಎದುರಾಗಿದ್ದು, ಮಕ್ಕಳ ಭವಿಷ್ಯ ಅತಂತ್ರವಾಗಿದೆ ಎಂದು ನಿವಾಸಿಗಳು ಅಲವತ್ತುಕೊಳ್ಳುತ್ತಿದ್ದಾರೆ.

ಶರೀಫ್ ನಗರದಲ್ಲಿ ಅಲೆಮಾರಿ ಬುಡಕಟ್ಟು ಜನಾಂಗದ ಹಾವಾಡಿಗ, ಸುಡಗಡು ಸಿದ್ಧರು, ಚನ್ನದಾಸರು, ಗೋಂದಳಿ, ಫಕೀರರು ಸೇರಿ ಊರೂರು ಅಲೆದು ವಿವಿಧ ವಸ್ತುಗಳನ್ನು ಮಾರಾಟ ಮಾಡಿ ಜೀವನ ನಡೆಸುವ ಸಮುದಾಯ ವಾಸಿಸುತ್ತಿದೆ.

ಕೆಲ ಕುಟುಂಬಗಳು ಜೋಪಡಿ ಹಾಕಿಕೊಂಡು ನೆಲೆ ಕಂಡುಕೊಂಡರೆ ಇನ್ನೂ ಕೆಲವರು ತಗಡಿನ ಶೀಟ್ ಅಳವಡಿಸಿಕೊಂಡು ಹಾಗೂ ಕೆಲವರು ಆರ್‌ಆರ್‌ಸಿಸಿ ಹೊಂದಿದ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಸರ್ಕಾರದಿಂದ ಮಂಜೂರಾದ 109 ಮನೆಗಳಿಗೆ 2008ರಲ್ಲಿ ಹಕ್ಕು ಪತ್ರ ನೀಡಲಾಯಿತು.

ಅಲೆಮಾರಿ ಜನಾಂಗ ವಾಸಿಸಲು ಆರಂಭವಾಗಿ 15 ವರ್ಷ ಗತಿಸಿದರೂ ಈಗಲೂ ಸಮರ್ಪಕ ಚರಂಡಿ, ಶುದ್ಧ ಕುಡಿವ ನೀರು ಸೇರಿ ಮೂಲ ಸೌಕರ್ಯ ಮರೀಚಿಕೆಯಾಗಿದೆ. ಕಂದಕೂರು ರಸ್ತೆಗೆ ಹೊಂದಿಕೊಂಡಿರುವ ನಗರವನ್ನು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಪಟ್ಟಣದಿಂದ ಬೇರ್ಪಡಿಸಿದೆ. ಆಸ್ಪತ್ರೆ, ಪಡಿತರ ಇನ್ನಿತರ ಅಗತ್ಯ ಕೆಲಸಕ್ಕೆ ಹೆದ್ದಾರಿ ದಾಟಿಕೊಂಡು ಬರಬೇಕಿದೆ.

ಶರೀಫ್ ನಗರದಲ್ಲಿ ಅಂಗನವಾಡಿ ಕೇಂದ್ರ ಇದ್ದು, ಬಾಡಿಗೆ ಕಟ್ಟಡವೊಂದರಲ್ಲಿ ನಡೆಸಲಾಗುತ್ತಿದೆ. ಸರ್ಕಾರಿ ಶಾಲೆಯ ಪಕ್ಕದ ನಿವೇಶನದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಲು ಪಿಲ್ಲರ್ ಹಾಕಿ ಕೈಬಿಡಲಾಗಿದೆ. ಶಾಲೆಯ ಕಟ್ಟಡ ನಿರ್ಮಿಸುವ ವೇಳೆಯೇ ಅಂಗನವಾಡಿ ಕಟ್ಟಡವನ್ನೂ ಆರಂಭಿಸಲಾಯಿತು. ಅರ್ಧಕ್ಕೆ ನಿಲ್ಲಿಸಿ 10 ವರ್ಷ ಗತಿಸಿದೆ. ಕಟ್ಟಡಕ್ಕೆಂದು ಬಿಡುಗಡೆಯಾದ ಅನುದಾನ ದುರ್ಬಳಕೆ ಆಗಿರುವ ಆರೋಪ ಕೇಳಿಬಂದಿದೆ. ಈ ಕುರಿತು ಪುರಸಭೆ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡದಿರುವುದು ಅನುಮಾನಕ್ಕೆ ಎಡೆಮಾಡಿದೆ.

ಶರೀಫ್ ನಗರದಲ್ಲಿ ಗದಗ-ವಾಡಿ ರೈಲ್ವೆ ಮಾರ್ಗ ಹಾದು ಹೋಗಿದೆ. ಸದ್ಯ ಸಂಬಂಧಿಸಿದ ಕಾಮಗಾರಿ ಪ್ರಗತಿಯಲ್ಲಿದ್ದು, ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ರೈಲ್ವೆ ಮಾರ್ಗಕ್ಕೆ ನಗರದ 35 ಮನೆಗಳ ಜಾಗ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸಂಬಂಧಿಸಿದ ಮನೆ ಮಾಲಿಕರಿಗೆ ನಿವೇಶನಕ್ಕೆ ಮೂರು ಲಕ್ಷ ಸೇರಿ ಮನೆಗಳ ಭೌತಿಕ ಸ್ಥಿತಿ ಆಧರಿಸಿ ಪರಿಹಾರ ನೀಡಲಾಗಿದೆ.

ಆ ಎಲ್ಲ ಮನೆಯವರು ಬೇರೆ ಕಡೆ ಮನೆ ವ್ಯವಸ್ಥೆ ಮಾಡಿಕೊಂಡು ಸ್ಥಳಾಂತರಕ್ಕೆ ಸಿದ್ಧತೆ ನಡೆಸಿದ್ದಾರೆ. ರೈಲ್ವೆ ಮಾರ್ಗಕ್ಕೆ ಹೊಂದಿಕೊಂಡೇ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. 2010-11ರಲ್ಲಿ ಆರಂಭಗೊಂಡಿರುವ ಶಾಲೆಯಲ್ಲಿ 1-5ನೇ ತರಗತಿ ವರೆಗಿನ 80 ಮಕ್ಕಳು ಕಲಿಯುತ್ತಿದ್ದಾರೆ. ಪಟ್ಟಣದ ಉಳಿದ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಹೋಲಿಸಿದರೆ ದಾಖಲಾತಿ ಹಾಗೂ ಹಾಜರಾತಿ ಪ್ರಮಾಣ ಹೇಳಿಕೊಳ್ಳುವಂತಿದೆ.

ಸದ್ಯ ರೈಲ್ವೇ ಮಾರ್ಗಕ್ಕೆ ಶಾಲೆ ಕಟ್ಟಡವನ್ನೂ ನೆಲಸಮಗೊಳಿಸಲಾಗುತ್ತಿದೆ ಎಂದು ಶಾಲೆ ಆವರಣದಲ್ಲಿ ಮಾರ್ಕ್ ಮಾಡಲಾಗಿದೆ. ಸ್ಥಳಾಂತರಿಸಲಾದ ಮನೆಗಳನ್ನು ಹೊರತುಪಡಿಸಿ ಉಳಿದ ಮನೆಗಳ ಮಕ್ಕಳ ಕಲಿಕೆ ಅತಂತ್ರವಾಗಿದೆ. ಸಮೀಪದಲ್ಲಿ ಒಂದು ಕಿಮೀ ಅಂತರದಲ್ಲಿ ಯಾವುದೇ ಶಾಲೆ ಇಲ್ಲದಿರುವುದು ಪಾಲಕರ ಆತಂಕಕಕ್ಕೆ ಕಾರಣವಾಗಿದೆ.

ಶಾಲೆ ಪಕ್ಕದಲ್ಲಿ ರೈಲ್ವೆ ಮಾರ್ಗಕ್ಕೆ ಸ್ವಾಧೀನಪಡಿಸಿಕೊಂಡು ಉಳಿದಿರುವ ರೈತರೊಬ್ಬರ ಜಮೀನಿದ್ದು, ಸರ್ಕಾರ ಜಮೀನು ಖರೀದಿಸಿ ಶಾಲೆ ಕಟ್ಟಡ ನಿರ್ಮಿಸಿದರೆ ಅನುಕೂಲವಾಗುತ್ತದೆ ಎಂದು ಅಲ್ಲಿನ ಜನ ಹೇಳುತ್ತಿದ್ದಾರೆ.

ಶರೀಫ್ ನಗರದಲ್ಲಿ ಅಲೆಮಾರಿ ಜನಾಂಗದವರೇ ಇದ್ದು, ಮಕ್ಕಳನ್ನು ಖಾಸಗಿ ಶಾಲೆಗಾಗಲಿ, ದೂರದ ಶಾಲೆಗಾಗಲಿ ದಾಖಲಿಸುವಷ್ಟು ಶಕ್ತರು ಯಾರೂ ಇಲ್ಲ. ಶಾಲೆ ಉಳಿಸಿಕೊಳ್ಳುವ ಸಂಬಂಧ ಹೋರಾಟ ನಡೆಸಿದ್ದೇವೆ. | ಮೆಹಬೂಬಸಾಬ ಹಾವಾಡಿಗ, ಅಲೆಮಾರಿ ಬುಡಕಟ್ಟು ಸಮುದಾಯದ ಅಧ್ಯಕ್ಷ, ಶರೀಫ್ ನಗರ. ಶರೀಫ್ ನಗರದ ಅಂಗನವಾಡಿ ಕಟ್ಟಡ ನಿರ್ಮಾಣ 10ವರ್ಷದ ಹಿಂದೆಯೇ ಆರಂಭವಾಗಿತ್ತು. ಹೀಗಾಗಿ ಕಾಮಗಾರಿಗೆ ಸಂಬಂಧಿಸಿದ ಮಾಹಿತಿ ಇಲ್ಲ. ಶಾಲೆ ಸ್ಥಳಂತರಕ್ಕೆ ಸಂಬಂಧಿಸಿದಂತೆ ತಹಸೀಲ್ದಾರರು, ಬಿಇಒ ಸ್ಥಳ ಪರಿಶೀಲನೆ ನಡೆಸಿದ್ದಾರೆ. | ಗೀತಾ ಕೋಳೂರು, ವಾರ್ಡ್ ಸದಸ್ಯೆ (ಮೊ: 97421 73687)ಶರೀಫ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಮಾಹಿತಿ ಪಡೆಯಲು ಭೂಸ್ವಾಧೀನಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಯಾವುದೇ ಉತ್ತರ ಬಂದಿಲ್ಲ. ಶಾಲೆ ಕಟ್ಟಡ ನಿರ್ಮಿಸಲು ಪರ್ಯಾಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.| ಸುರೇಂದ್ರ ಕಾಂಬ್ಳೆ, ಬಿಇಒ ಕುಷ್ಟಗಿ.