ಸರಗೂರು ಪಟ್ಟಣದ ಜೆಎಸ್‌ಎಸ್ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ವಸ್ತುಪ್ರದರ್ಶನ ಗಮನ ಸೆಳೆಯಿತು.  
ನ್ಯೂಸ್

ಗಮನ ಸೆಳೆದ ಮಕ್ಕಳ ಶೈಕ್ಷಣಿಕ ವಸ್ತುಪ್ರದರ್ಶನ

ಸರಗೂರು: ಪಟ್ಟಣದ ಜೆಎಸ್‌ಎಸ್ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳ ಶೈಕ್ಷಣಿಕ ವಸ್ತು ಪ್ರದರ್ಶನ ಗಮನ ಸೆಳೆಯಿತು.

ತರಗತಿವಾರು ವಿದ್ಯಾರ್ಥಿಗಳು ತಯಾರಿಸಿದ್ದ ವಿಜ್ಞಾನ ಮಾದರಿಗಳು, ಗಣಿತ ಮತ್ತು ಭಾಷಾ ವಿಷಯಗಳಿಗೆ ಸಂಬಂಧಿಸಿದ ತಯಾರು ಮಾಡಿದ ಮಾದರಿಗಳು ಎಲ್ಲರನ್ನೂ ಆಕರ್ಷಿಸಿತು. ಪ್ರತಿ ಮಾದರಿಗೂ ಮಕ್ಕಳು ನೀಡುತ್ತಿದ್ದ ವಿವರಣೆ ಅಭೂತಪೂರ್ವವಾಗಿತ್ತು.

ಮುಖ್ಯ ಶಿಕ್ಷಕ ಮೊಹಮ್ಮದ್ ಅಂಜುಮ್ ಪಾಷ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ ಒಂದು ಪ್ರಯತ್ನ ಇದಾಗಿದೆ. ಇದರಿಂದ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬಹುದು. ಜತೆಗೆ ತರಗತಿಗಳಲ್ಲಿ ಕ್ರಿಯಾಶೀಲತೆಯಿಂದ ಕೂಡಿರಲು ಸಾಧ್ಯವಾಗುತ್ತದೆ ಎಂದರು.

ಇಂತಹ ವಸ್ತುಪ್ರದರ್ಶನಗಳ ಆಯೋಜನೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಲಿದೆ ಎಂದು ಹೇಳಿದರು. ಶಿಕ್ಷಕಿಯರಾದ ಜಯಲಕ್ಷ್ಮೀ, ಶೀಲಾರಾಜ್, ಡಿ.ನಂದಿತಾ, ಜಿ.ಮಂಜುನಾಥ್, ಕೃಷ್ಣಮೂರ್ತಿ ಇತರರಿದ್ದರು.