ಹೊಳೆಹೊನ್ನೂರು: ವಿಕಲಾಂಗ ಮಕ್ಕಳಲ್ಲಿ ವಿಶೇಷವಾದ ಜ್ಞಾನವಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ತಿಳಿಸಿದರು.
ಪಟ್ಟಣದ ಪಿಯು ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ವಿಕಲಾಂಗ ಮಕ್ಕಳ ಹಾಗೂ ಪಾಲಕರ ಸಭೆ ಉದ್ಘಾಟಿಸಿ ಮಾತನಾಡಿ, ಮನುಷ್ಯ ಎಂದ ಮೇಲೆ ಒಂದಲ್ಲಾ ಒಂದು ರೀತಿ ನ್ಯೂನ್ಯತೆ ಇರುತ್ತದೆ. ಅದನೆಲ್ಲ ಛಲದಿಂದ ಮೆಟ್ಟಿನಿಂತಾಗ ಮಾತ್ರ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ವಿಕಲಾಂಗ ಮಕ್ಕಳಲ್ಲಿ ಪಾಲಕರು ಹಾಗೂ ಸಾರ್ವಜನಿಕರು ಆತ್ಮವಿಶ್ವಾಸ ತುಂಬಿದಾಗ ಮಾತ್ರ ಅವರನ್ನು ಸಮಾಜದಲ್ಲಿ ಉನ್ನತ ಸ್ಥಿತಿಗೆ ತರಲು ಸಾಧ್ಯವಾಗುತ್ತದೆ ಎಂದರು.
ಭದ್ರಾವತಿ ತಾಲೂಕು ವೈದ್ಯಾಧಿಕಾರಿ ಡಾ. ಅಶೋಕ್ ಮಾತನಾಡಿ, ಪಾಲಕರು ಮಕ್ಕಳನ್ನು ಗರ್ಭ ವ್ಯವಸ್ಥೆಯಿಂದಲೇ ಸುರಕ್ಷಿತವಾಗಿ ಕಾಣಬೇಕು. ಮಕ್ಕಳಲ್ಲಿನ ನ್ಯೂನತೆಗಳಿಗೆ ಚಿಕಿತ್ಸೆಗಳಿದ್ದು, ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಿದರೆ ಮಕ್ಕಳು ಮಾನಸಿಕವಾಗಿ ಸದೃಢವಾಗಬಹುದು. ವಿಕಲಾಂಗ ಮಕ್ಕಳಿಗೆ ಸರ್ಕಾರದಿಂದ ಅನೇಕ ಸಲಕರಣೆಗಳನ್ನು ಉಚಿತವಾಗಿ ನೀಡುತ್ತಿದ್ದು, ಮಕ್ಕಳು ಇದರ ಸಹಾಯದಿಂದ ನ್ಯೂನತೆಯನ್ನು ತಕ್ಕಮಟ್ಟಿಗೆ ಸರಿಪಡಿಕೊಳ್ಳಬಹುದು ಎಂದರು.
ರಾಜ್ಯದಲ್ಲಿ ಶೇ.5ರಷ್ಟು ವಿಕಲಾಂಗ ಮಕ್ಕಳಿದ್ದಾರೆ. ಸರ್ಕಾರ ಸಂಪೂರ್ಣವಾಗಿ ವಿಕಲಾಂಗತೆ ನಿರ್ಮೂಲನೆ ಮಾಡಬೇಕೆಂದು ನಿರ್ಧಾರ ಮಾಡಿದ್ದು, ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಪ್ರತಿಯೊಂದು ಮಗುವನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಪಾಲಕರು ಇದರ ಪ್ರಯೋಜನ ಪಡೆದು ಮಕ್ಕಳ ಜೀವನ ರೂಪಿಸಬೇಕು ಎಂದರು.
ಎಸ್‌ಎಸ್‌ಕೆಡಿವೈಪಿಸಿ ಜಯಲಕ್ಷ್ಮೀ, ಗ್ರಾಪಂ ಮಾಜಿ ಅಧ್ಯಕ್ಷ ಆರ್.ಉಮೇಶ್, ಯುವ ಮುಖಂಡ ಎ.ಕೆ.ರಮೇಶ್, ರಂಗನಾಥ, ತಿಪ್ಪೇಶ್ ನಾಯಕ್, ಹನುಮಂತಪ್ಪ, ಮಂಜುನಾಥ, ಬಸವರಾಜ, ಆನಂದ, ರೇಣುಕಾ, ಪ್ರಭಾಕರ್, ಕುಮಾರ್, ರಂಗನಾಯಕಿ ಇತರರಿದ್ದರು.