ಮುಂಡಗೋಡ: ಸುಮಾರು 600 ಕಿಮೀ ಪ್ರಯಾಣಿಸಿ ಬಂದರೂ ತಾಯಿಯ ಮೃತದೇಹದ ಹತ್ತಿರಕ್ಕೆ ತೆರಳಿ ಅಂತಿಮ ದರ್ಶನ ಪಡೆಯಲು ಮಕ್ಕಳಿಗೆ ಸಾಧ್ಯವಾಗಲಿಲ್ಲ...
ತಾಲೂಕಿನ ಇಂದಿರಾನಗರ ಕೊಪ್ಪ ಗ್ರಾಮದ ಸುಶೀಲಾ ರೇವಣಕರ (55) ಎಂಬುವವರು ಹೃದಯಾಘಾತದಿಂದ ಮಂಗಳವಾರ ಸಂಜೆ ಮನೆಯಲ್ಲಿ ಮೃತಪಟ್ಟಿದ್ದರು. ಇವರಿಗೆ ಏಳು ಮಕ್ಕಳು. ಅವರಲ್ಲಿ ಇಬ್ಬರು ಮಹಾರಾಷ್ಟ್ರದ ಔರಾಂಗಾಬಾದ್‌ನಲ್ಲಿ ವಾಸಿಸುತ್ತಿದ್ದರು.
ತಾಯಿಯ ಅಂತಿಮ ದರ್ಶನ ಪಡೆಯಲು ಔರಂಗಾಬಾದ್‌ನಿಂದ ಬರುತ್ತಿದ್ದ ಇವರನ್ನು ಕರ್ನಾಟಕದ ಗಡಿ ಪ್ರವೇಶ ಮಾಡಲು ಪೊಲೀಸರು ತಡೆದಿದ್ದರು. ಅಲ್ಲಿಯೇ 3 ಗಂಟೆ ಕಳೆದ ಇವರು ನಂತರ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡ ಮೇಲೆ ಕರ್ನಾಟಕದ ಗಡಿ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿತ್ತು.
ತಾಲೂಕಿನ ಗಡಿಗೆ ಕಾರಿನಲ್ಲಿ ಬಂದಿದ್ದ ಮೂವರಿಗೆ ಇಲ್ಲಿನ ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಪಿಪಿಇ ಕಿಟ್ ತೊಡಿಸಿ ಗ್ರಾಮಕ್ಕೆ ಕರೆದುಕೊಂಡು ಹೋದರು. ದೂರದಿಂದಲೇ ತಾಯಿಯ ಮೃತದೇಹ ನೋಡಬಹುದೆಂದು ಮೊದಲೇ ಇವರಿಗೆ ಸೂಚಿಸಲಾಗಿತ್ತು.
ಅದರಂತೆ ಇಬ್ಬರೂ ಪುತ್ರರು ಹಾಗೂ ಸೊಸೆ ಮನೆಯ ಆವರಣದಲ್ಲಿ ನಿಂತು ತಾಯಿಯ ಅಂತಿಮ ದರ್ಶನ ಪಡೆದರು. ತಾಯಿಯ ಸ್ಪರ್ಶ ಮಾಡಲಾಗದೆ ಅವರು ಬಿಕ್ಕಿ-ಬಿಕ್ಕಿ ಅಳುತ್ತಿದ್ದ ದೃಶ್ಯ ಅಲ್ಲಿದ್ದ ಜನರಲ್ಲಿಯೂ ಕಣ್ಣೀರು ತರಿಸಿತು. ಕುಟುಂಬದ ಇತರ ಸದಸ್ಯರ ಹತ್ತಿರಕ್ಕೂ ಹೋಗಲು ಪೊಲೀಸರು ಬಿಡಲಿಲ್ಲ.
ಕೆಲ ಸಮಯದ ನಂತರ ತಾಲೂಕಿನ ಮುರಾರ್ಜಿ ವಸತಿ ನಿಲಯದ ಕ್ವಾರಂಟೈನ್ ಕೇಂದ್ರಕ್ಕೆ ಇವರು ಅಧಿಕಾರಿಗಳೊಂದಿಗೆ ತೆರಳಿದರು. ಇತ್ತ ಇನ್ನುಳಿದ ಪುತ್ರರು ಹಾಗೂ ಗ್ರಾಮಸ್ಥರು ಸೇರಿ ಬುಧವಾರ ಬೆಳಗಿನ ಜಾವ ಮೃತರ ಅಂತ್ಯಕ್ರಿಯೆ ನೆರವೇರಿಸಿದರು.