Mushroom farmers : ಇಂದಿನ ಇಂಟರ್ನೆಟ್ ಜಗತ್ತಿನಲ್ಲಿ ಚಾಂಪಿಯನ್ ಆಗಿರುವ ಯೂಟ್ಯೂಬ್ ಕೇವಲ ಮನರಂಜನಾ ವೇದಿಕೆಯಾಗಿ ಮಾತ್ರವಲ್ಲದೆ, ಲಕ್ಷಾಂತರ ಜನರಿಗೆ ಜೀವನೋಪಾಯವಾಗಿಯೂ ಮಾರ್ಪಟ್ಟಿದೆ ಎಂದು ಹೇಳುವುದು ಅತಿಶಯೋಕ್ತಿಯಲ್ಲ. ಭಾರತದಿಂದ ಯುನೈಟೆಡ್ ಸ್ಟೇಟ್ಸ್ವರೆಗೆ, ಯೂಟ್ಯೂಬ್ ಮೂಲಕ ಲಕ್ಷಾಂತರ ಡಾಲರ್ಗಳಿಸುವ ಅನೇಕ ಕಂಟೆಂಟ್ ಕ್ರಿಯೆಟರ್ಸ್ ಇದಾರೆ.
ಕಂಟೆಂಟ್ ಕ್ರಿಯೆಟರ್ಗಳು ಯೂಟ್ಯೂಬ್ ಮೂಲಕ ಲಕ್ಷಾಂತರ ಹಣ ಸಂಪಾದಿಸುತ್ತಿದ್ದಾರೆ. ಇಲ್ಲಿ ಕೇವಲ ಯುವಕರು, ವಯಸ್ಕರು ಮಾತ್ರವಲ್ಲ, ಮಕ್ಕಳು ಕೂಡ ಯೂಟ್ಯೂಬ್ ಮೂಲಕ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ಕೇರಳದ ಈ ಮಕ್ಕಳು.
ಹೌದು, ಯೂಟ್ಯೂಬ್ ವಿಡಿಯೋಗಳಿಂದ ಅಣಬೆ ಕೃಷಿ ಕಲಿತ ಈ ಇಬ್ಬರು ಮಕ್ಕಳು ತಮ್ಮ ಪಾಲಕರ ಬೆಂಬಲದೊಂದಿಗೆ ಈಗ ತಿಂಗಳಿಗೆ 50,000 ರೂ. ಆದಾಯ ಗಳಿಸುತ್ತಿದ್ದಾರೆ. ಇದನ್ನು ಕೇಳಿದಾಗ ಒಂದು ಕ್ಷಣ ನೀವು ನಂಬದಿರಬಹುದು ಆದರೆ, ಇದೇ ಸತ್ಯ.
ವೈಷ್ಣವ್ (15) ಮತ್ತು ಆತನ ತಂಗಿ ದಕ್ಷಾ (8) ಪರವೂರಿನ ಪುತನ್‌ಕುಲಂನ ಸುಜಿ ರಾಜ್ ಮತ್ತು ಶಾರಿ ದಂಪತಿಯ ಮಕ್ಕಳು. ಶಾರಿ ಅವರು ಎಂಜಿ ವಿಶ್ವವಿದ್ಯಾಲಯದಲ್ಲಿ ಸಹಾಯಕಿಯಾಗಿದ್ದಾರೆ. ವೈಷ್ಣವ್ ಕೊಟ್ಟಾಯಂನ ಮನ್ನಾನಂನಲ್ಲಿರುವ ಕೆಇ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ದಕ್ಷಾ ಕಲಾಯಿಕ್ಕೋಡ್‌ನ ಐಶ್ವರ್ಯ ಪಬ್ಲಿಕ್ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದಾರೆ. ಒಬ್ಬಂಟಿಯಾಗಿ ಕೆಲಸ ಮಾಡಲು ದಕ್ಷಾ ತುಂಬಾ ಚಿಕ್ಕವಳಾಗಿದ್ದರು ಕೂಡ ಪ್ರತಿಯೊಂದು ಕೆಲಸಕ್ಕೂ ತನ್ನ ಅಣ್ಣನಿಗೆ ಸಹಾಯ ಮಾಡುತ್ತಾಳೆ.
ಅಣ್ಣ-ತಂಗಿ ಯೂಟ್ಯೂಬ್ ನೋಡಿ ಆರು ತಿಂಗಳ ಹಿಂದೆ ತಮ್ಮ ಮನೆಯಲ್ಲಿ ಒಂದು ಕೋಣೆಯೊಳಗೆ ಕೇವಲ ಎರಡು ಹಾಸಿಗೆಗಳೊಂದಿಗೆ ಸಿಂಪಿ ಅಣಬೆಗಳನ್ನು ಬೆಳೆಸಲು ಪ್ರಾರಂಭಿಸಿದರು. ಈಗ, ಅವರು 500 ಹಾಸಿಗೆಗಳಿಗೆ ವಿಸ್ತರಿಸಿದ್ದಾರೆ. ಅಣಬೆಗಳನ್ನು ಸೂಪರ್ ಮಾರ್ಕೆಟ್ ಮತ್ತು ತರಕಾರಿ ಅಂಗಡಿಗಳಲ್ಲಿ "ಮೈಕೋ ಡಿಲೈಟ್ಸ್" ಎಂಬ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಅವುಗಳನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ (FSSAI)ಯೂ ನೋಂದಾಯಿಸಲಾಗಿದೆ.
ವೈಷ್ಣವ್ ಮತ್ತು ಶಾರಿ ವಾರಕ್ಕೊಮ್ಮೆ ಅಂದರೆ ಶುಕ್ರವಾರ ಮನೆಗೆ ಹಿಂತಿರುಗುತ್ತಾರೆ. ಎಲ್ಲ ಕೆಲಸ ಮುಗಿಸಿದ ಬಳಿಕ ಮತ್ತೆ ಸೋಮವಾರ ವೈಷ್ಣವ್ ಶಾಲೆಗೆ ಹಿಂತಿರುಗಿದರೆ, ಶಾರಿ ತಮ್ಮ ಕೆಲಸಕ್ಕೆ ವಾಪಸ್ಸಾಗುತ್ತಾರೆ. ಬಿಡುವಿನ ದಿನಗಳಲ್ಲಿ ಹೆಚ್ಚಾಗಿ ಕೃಷಿ ಕೆಲಸದಲ್ಲೇ ತೊಡಗಿಸಿಕೊಳ್ಳುತ್ತಾರೆ. ವೈಷ್ಣವ್ ಅವರ ತಂದೆ ಸುಜಿ ರಾಜ್ ಮಾರ್ಕೆಂಟಿಂಗ್ ಕೆಲಸ ನೋಡಿಕೊಳ್ಳುತ್ತಾರೆ.
* ಅಣಬೆಗಳನ್ನು ಪಿಪಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ಬೆಳೆಸಲಾಗುತ್ತದೆ.
* ಅಣಬೆ ಉಂಡೆಗಳನ್ನು ಬಿಸಿ ನೀರಿನಲ್ಲಿ ನೆನೆಸಲಾಗುತ್ತದೆ.
* ತಣ್ಣಗಾದ ನಂತರ, ಬೀಜಗಳನ್ನು ಮೃದುಗೊಳಿಸಿದ ಮರದ ಪುಡಿಯಲ್ಲಿ ಬೆರೆಸಲಾಗುತ್ತದೆ.
* 15 ದಿನಗಳವರೆಗೆ ಸೂರ್ಯನ ಬೆಳಕಿನಿಂದ ದೂರವಿಡಲಾಗುತ್ತದೆ.
* ನಂತರ ಹಸಿರು ಬಲೆಯಿಂದ ಮುಚ್ಚಿದ ಉತ್ಪಾದನಾ ಕೋಣೆಗೆ ಸ್ಥಳಾಂತರಿಸಲಾಗುತ್ತದೆ.
* ಹೊರಗಿನ ಕವರ್‌ನಲ್ಲಿ ರಂಧ್ರಗಳನ್ನು ಮಾಡಲಾಗುತ್ತದೆ.
* ಏಳನೇ ದಿನದ ಹೊತ್ತಿಗೆ, ಅಣಬೆಗಳು ಮೊಳಕೆಯೊಡೆದು ರಂಧ್ರಗಳ ಮೂಲಕ ಬೆಳೆಯುತ್ತವೆ.
* ಮಾರಾಟದ ಬೆಲೆ: ಕೆಜಿಗೆ 500 ರೂ.
* ಒಂದು ಪ್ಯಾಕೆಟ್ ಬೀಜಗಳು: 50 ರೂ.
* ಒಂದು ಚೀಲಕ್ಕೆ (25 ಕೆಜಿ): 1,000 ರೂ.
* ಅಂದಾಜು ಹೂಡಿಕೆ: 20,000 ರೂ.
* ಒಂದು ಕೊಯ್ಲಿನಿಂದ 5 ರಿಂದ 6 ಕೆಜಿ ಅಣಬೆಗಳು ಸಿಗುತ್ತವೆ.
* ಪ್ರತಿ ಹಾಸಿಗೆ ಮೂರು ಕೊಯ್ಲುಗಳನ್ನು ನೀಡುತ್ತದೆ.