ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮನೋವೈದ್ಯ ಡಾ. ಸಿ.ಆರ್.ಚಂದ್ರಶೇಖರ್ ಅವರು ವಿದ್ಯಾರ್ಥಿಗಳಿಗೆ ಓದುವ ಖುಷಿ, ಪರೀಕ್ಷಾ ಸಂಭ್ರಮ ಪುಸ್ತಕವನ್ನು ನೀಡಿದರು. 
ನ್ಯೂಸ್

ಮಕ್ಕಳೇ, ಆರೋಗ್ಯದ ಕಡೆ ಗಮನವಿರಲಿ

ಶಿವಮೊಗ್ಗ: ಭಾರತೀಯರ ಜೀವಿತಾವಧಿ ಸರಾಸರಿ 70 ವರ್ಷ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದ್ದು, ಶೇ.35ರಷ್ಟು ವಿದ್ಯಾರ್ಥಿಗಳು 25ನೇ ವಯಸ್ಸಿನಲ್ಲೇ ಮರಣ ಹೊಂದುತ್ತಿದ್ದಾರೆ ಎಂದು ಮನೋವೈದ್ಯ ಡಾ. ಸಿ.ಆರ್.ಚಂದ್ರಶೇಖರ್ ಕಳವಳ ವ್ಯಕ್ತಪಡಿಸಿದರು.

ಅಂಬೇಡ್ಕರ್ ಭವನದಲ್ಲಿ ಪ್ರಗತಿ ಆ್ಯಪಲ್ ಶಿಕ್ಷಣ ಸಂಸ್ಥೆಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಮಕ್ಕಳಿಗೆ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಮಕ್ಕಳಲ್ಲಿ ಧೈರ್ಯ, ಮಾನಸಿಕ ಸ್ಥೈರ್ಯ ಕಡಿಮೆಯಾಗುತ್ತಿದೆ. ಮಕ್ಕಳು ಆರೋಗ್ಯದತ್ತ ಗಮನ ನೀಡಬೇಕು ಎಂದು ತಿಳಿಸಿದರು.
ನಿಯಮಿತ ಆಹಾರ, ಕಾಲ್ನಡಿಗೆ, ಸರಿಯಾದ ನಿದ್ದೆ ಮಕ್ಕಳಿಗೆ ಅವಶ್ಯ. ಇದು ಅವರ ಬುದ್ದಿಶಕ್ತಿ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಪಾಲಕರು ಇದರ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ರಾಮಕೃಷ್ಣ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಿ.ಎಂ.ವೆಂಕಟರಮಣ ಸ್ಮರಣಾರ್ಥ ‘ಓದುವ ಖುಷಿ, ಪರೀಕ್ಷಾ ಸಂಭ್ರಮ’ ಪುಸ್ತಕವನ್ನು ಮಕ್ಕಳಿಗೆ ವಿತರಿಸಲಾಯಿತು. ರಾಮಕೃಷ್ಣ ವಿದ್ಯಾನಿಕೇತನದ ಕಾರ್ಯದರ್ಶಿ ಶೋಭಾ ವೆಂಕಟರಮಣ, ಡಿಡಿಪಿಐ ಮಂಜುನಾಥ್, ಬಿಇಒ ರಮೇಶ್, ಪ್ರಗತಿ ಸಂಸ್ಥೆಯ ವಿಜಯಕುಮಾರ್ ಬಳಿಗಾರ್, ಪ್ರಮುಖರಾದ ಸಿ.ಎಸ್.ರಾಘವೇಂದ್ರ, ಎಸ್.ವಿ.ಗುರುರಾಜ್, ನಫೀಸ್ ಶೇಖ್ ಇತರರಿದ್ದರು.