ಶಿವಮೊಗ್ಗ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವವನ್ನು ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು. ಡಿ.ಎಸ್.ಅರುಣ್, ಎಚ್.ಎಸ್.ಸುಂದರೇಶ್, ಎಸ್.ಆರ್.ಮಂಜುನಾಥ್, ರಮೇಶ್ ಮುಂತಾದವರಿದ್ದರು.  
ನ್ಯೂಸ್

ಮಕ್ಕಳಲ್ಲಿ ಇರಬೇಕು ಸ್ಪರ್ಧಾ ಭಾವನೆ: ಶಾಸಕ ಚೆನ್ನಿ

ಶಿವಮೊಗ್ಗ: ನಮ್ಮ ರಾಷ್ಟ್ರದ ವೈವಿಧ್ಯಮಯ ಸಂಸ್ಕೃತಿ ಹಾಗೂ ಮಕ್ಕಳಲ್ಲಿರುವ ವಿಭಿನ್ನ ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ನಗರದಲ್ಲಿ ಗುರುವಾರ ಶಿವಮೊಗ್ಗ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ಎಲ್ಲ ಮಕ್ಕಳು ಗೆಲ್ಲಲು ಸಾಧ್ಯವಿಲ್ಲ. ಆದರೆ ಎಲ್ಲರಲ್ಲೂ ಸ್ಪರ್ಧಾ ಭಾವನೆ ಮುಖ್ಯ ಎಂದರು.

ನಮ್ಮದು ಸಾಂಸ್ಕೃತಿಕ ರಾಷ್ಟ್ರ. ಅದಕ್ಕೆ ಪೂರಕವಾದ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿವೆ. ವೈವಿಧ್ಯಮಯ ಸ್ಪರ್ಧೆಗಳು ಮತು ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ನಮ್ಮದು ವೈವಿಧ್ಯಮಯ, ಸಾಂಸ್ಕೃತಿಕ ದೇಶ. ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸವನ್ನು ಯುವ ಪೀಳಿಗೆ ಮಾಡಬೇಕು. ನಮ್ಮ ಸಂವಿಧಾನದಲ್ಲಿ ಹಕ್ಕಿನ ಜತೆ ಜವಾಬ್ದಾರಿಗಳನ್ನೂ ಉಲ್ಲೇಖಿಸಲಾಗಿದೆ. ಇದನ್ನು ಅರಿತು ಎಲ್ಲರೂ ಮುಂದೆ ಸಾಗಬೇಕು. ಮಕ್ಕಳಲ್ಲಿ ಶಿಷ್ಟಾಚಾರ ಮತ್ತು ಸಂಸ್ಕಾರ ಕಲಿಸುವುದು ನಮ್ಮ ಕರ್ತವ್ಯ. ಪ್ರತಿಭಾ ಕಾರಂಜಿ ಮೂಲಕ ಈ ಕೆಲಸ ಆಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ಕೆಲ ವರ್ಷಗಳ ಹಿಂದೆ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪಠ್ಯೇತರ ಚಟುವಟಿಕೆಗಳು ಹೆಚ್ಚಿದ್ದವು. ಈಗದು ಕಡಿಮೆಯಾಗಿದೆ. ಓದಿನ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಆದರೆ ಮಕ್ಕಳಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧಾ ಭಾವನೆ ಬೆಳೆಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಡಿಡಿಪಿಐ ಎಸ್.ಆರ್.ಮಂಜುನಾಥ್, ಬಿಇಒ ರಮೇಶ್, ಪ್ರಾಚಾರ್ಯ ವೆಂಕಟೇಶ್, ಪ್ರಮುಖರಾದ ಜಿ.ಎಂ.ದಿನೇಶ್ ಇತರರಿದ್ದರು.