ನ್ಯೂಸ್

ಹಿಂದು ಧರ್ಮವನ್ನು ಉಳಿಸಲು ಮಕ್ಕಳು ಪಣ ತೊಡಬೇಕು

ಮೈಸೂರು: ಅತ್ಯಂತ ಹಳೆಯ ಸನಾತನ ಧರ್ಮವಾಗಿರುವ ನಮ್ಮ ಹಿಂದು ಧರ್ಮವನ್ನು ಉಳಿಸಲು ಮಕ್ಕಳು ಪಣ ತೊಡಬೇಕು ಎಂದು ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕರೆ ನೀಡಿದರು.
ಅವಧೂತ ದತ್ತಪೀಠದ ವತಿಯಿಂದ ಭಾನುವಾರ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆಯೋಜಿಸಿದ್ದ 10ನೇ ಕರ್ನಾಟಕ ರಾಜ್ಯ ಮಟ್ಟದ ಅಂತರಶಾಲಾ ಸಾಮೂಹಿಕ ಭಜನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
ನಮ್ಮ ಧರ್ಮವನ್ನು ಬಿಟ್ಟು ಬೇರೆಡೆಗೆ ಹೋಗಬಾರದು. ಹಾಗೆ ಹೋದರೆ ನಮ್ಮನ್ನು ನಾವು ಕೊಂದುಕೊಂಡಂತೆ. ಮಕ್ಕಳಿಂದ ಹಿಡಿದು ಮನೆಯ ಹಿರಿಯರು ಕೂಡ ಭಗವದ್ಗೀತೆ ಓದಬೇಕು, ಕೇಳಬೇಕು, ನಮ್ಮ ಭೂಮಿ ನಮ್ಮ ದೇಶವನ್ನು ಪ್ರೀತಿಸಬೇಕು. ಬೇರೆ ದೇಶಗಳಲ್ಲಿ ಬದುಕುವುದು ಕಷ್ಟ ನಮ್ಮ ದೇಶದಲ್ಲೇ ಇದ್ದು ನಮ್ಮಲ್ಲಿ ಬೆಳೆದ ಅನ್ನವನ್ನು ತಿನ್ನಬೇಕು ಎಂದು ತಿಳಿ ಹೇಳಿದರು.
ಭಗವದ್ಗೀತೆಯಿಂದ ನಮ್ಮ ದೇಶ ನಮ್ಮ ಧರ್ಮವನ್ನು ಉಳಿಸಬಹುದು, ನಮ್ಮ ಧರ್ಮವನ್ನು ಉಳಿಸಿ ಬೆಳೆಸಿ, ದೇಶದ ಪ್ರಗತಿಗೆ ಶ್ರಮಿಸಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಅಮೆರಿಕದಲ್ಲಿ ಶಾಲೆಯಲ್ಲೇ ಭಗವದ್ಗೀತೆ ಕಲಿಸುತ್ತಾರೆ. ಅಲ್ಲಿನ ಮಕ್ಕಳು ಭಗವದ್ಗೀತೆಯನ್ನು ಕಂಠಪಾಠ ಮಾಡಿದ್ದಾರೆ,ಭಗವದ್ಗೀತೆಯಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಭಗವದ್ಗೀತೆಯನ್ನು ಶಾಲೆಗಳಲ್ಲಿ ಪರಿಚಯ ಮಾಡಬೇಕು. ನಮ್ಮ ಆಶ್ರಮದ ವತಿಯಿಂದಲೇ ಆನ್ಲೈನ್ ಮೂಲಕ ಉಚಿತವಾಗಿ ಭಗವದ್ಗೀತೆಯನ್ನು ಕಲಿಸಿಕೊಡಲಾಗುತ್ತದೆ ಎಲ್ಲರೂ ಇದಕ್ಕೆ ನೋಂದಣಿ ಮಾಡಿಕೊಳ್ಳಿ ಎಂದು ಶ್ರೀಗಳು ಹೇಳಿದರು.
ಮಕ್ಕಳೇ ಯಾರೂ ಕೂಡ ಮೊಬೈಲ್ ಫೋನ್‌ಗಳನ್ನು ನೋಡಬೇಡಿ ಅದನ್ನು ಮುಟ್ಟಲೂ ಬೇಡಿ ಇದರಿಂದ ಸಮಯ ಹಾಳು. ಮನಸ್ಸು ಹಾಳು, ಜೀವನವೇ ನಾಶವಾಗಿ ಬಿಡುತ್ತದೆ. ಈಗಲೇ ಇದನ್ನು ಬಿಟ್ಟುಬಿಡಿ, ತಂದೆ ತಾಯಿಗಳು ಕೂಡ ಮಕ್ಕಳಿಗೆ ಮೊಬೈಲ್ ಫೋನ್ ಕೊಟ್ಟು ಅಭ್ಯಾಸ ಮಾಡಬೇಡಿ ಎಂದರು.
ಮನೆಗೆ ಯಾರಾದರೂ ಅತಿಥಿಗಳು ಬಂದಾಗ ನಮ್ಮ ರೂಮನ್ನೇ ಬಿಟ್ಟುಕೊಟ್ಟುಬಿಡುತ್ತೇವೆ ಅದು ನಮ್ಮ ಅತಿಥಿ ಸತ್ಕಾರ. ಹಾಗೆಂದು ಇಡೀ ಮನೆಯನ್ನೇ ಬಿಟ್ಟುಕೊಡುವುದು ಸರಿಯಲ್ಲ ಈಗಾಗಲೇ ನಾವು ದೇಶವನ್ನೇ ಬಿಟ್ಟು ಬಿಟ್ಟಿದ್ದೇವೆ. ಹೆಣ್ಣು ಮಕ್ಕಳು, ಮಹಿಳೆಯರು ಹಣೆಗೆ ಬೊಟ್ಟು ಇಟ್ಟುಕೊಳ್ಳುವುದನ್ನು ಮರೆಯಬಾರದು ಹೀಗೆ ಹಣೆಯಲ್ಲಿ ತಿಲಕ ಇಟ್ಟುಕೊಂಡರೆ ನಮ್ಮ ಮೆಮೊರಿ ಪವರ್ ಹೆಚ್ಚಾಗುತ್ತದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ ಎಂದು ಹೇಳಿದರು.
ಕರ್ನಾಟಕದ 25 ಜಿಲ್ಲೆಗಳಲ್ಲಿ ಜುಲೈ-ಆಗಸ್ಟ್‌ನಲ್ಲಿ ನಡೆದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಜಿಲ್ಲಾ ಮಟ್ಟದ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ವಿತರಿಸಿದರು.
ಶನಿವಾರ ನಡೆದ ರಾಜ್ಯಮಟ್ಟದ ಅಂತಿಮ ಭಜನೆ ಗಾಯನ ಸ್ಪರ್ಧೆಯ ಜೂನಿಯರ್ ಮತ್ತು ಸೀನಿಯರ್ ವಿಭಾಗದ ಫಲಿತಾಂಶವನ್ನು ದತ್ತಪೀಠ ಆಸ್ಥಾನ ವಿದ್ವಾನ್ ಶಂಕರ್ ರಮೇಶ್ ಪ್ರಕಟಿಸಿದರು. ಭಜನೆ ಸೀನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಹುಬ್ಬಳ್ಳಿಯ ಚಿನ್ಮಯ ವಿದ್ಯಾಲಯ ಶಾಲೆ ಪಡೆದುಕೊಂಡಿತು. ದ್ವಿತೀಯ ಬಹುಮಾನವನ್ನು ಮೈಸೂರಿನ ಡಿ ಎ ವಿ ಪಬ್ಲಿಕ್ ಸ್ಕೂಲ್ ಪಡೆದುಕೊಂಡಿತು. ಮೂರನೇ ಬಹುಮಾನವನ್ನು ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಪಡೆದುಕೊಂಡಿತು.
ಜೂನಿಯರ್ ವಿಭಾಗದಲ್ಲಿ ಮೊದಲನೇ ಬಹುಮಾನವನ್ನು ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಪಡೆದುಕೊಂಡರೆ ದ್ವಿತೀಯ ಬಹುಮಾನವನ್ನು ಬೆಂಗಳೂರಿನ ವಿಇಎಸ್ ಮಾಡೆಲ್ ಕಾನ್ವೆಂಟ್ ಮತ್ತು ಮಂಗಳೂರಿನ ಶಾರದ ವಿದ್ಯಾಲಯ ಪಡೆದುಕೊಂಡವು. ಮೂರನೇ ಬಹುಮಾನವನ್ನು ಬಳ್ಳಾರಿಯ ಡ್ರೀಮ್ ವರ್ಲ್ಡ್ ಸ್ಕೂಲ್ ಪಡೆದುಕೊಂಡಿತು.
ಇದೇ ವೇಳೆ ಪಕ್ಕವಾದ್ಯ ನುಡಿಸಿದ ಎಲ್ಲರಿಗೂ ವಿಶೇಷ ಬಹುಮಾನವನ್ನು ವಿತರಿಸಲಾಯಿತು.