ನ್ಯೂಸ್

ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ

ಎ. ಆರ್. ರಘುರಾಮ

ರಾವಂದೂರು: ಶಿಕ್ಷಕರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಶಾಲೆಗಳು ಅಭಿವೃದ್ಧಿ ಹೊಂದುತ್ತವೆ ಎಂದು ಮುಖ್ಯಶಿಕ್ಷಕಿ ಲಿಲ್ಲಿಮೇರಿ ತಿಳಿಸಿದರು. ಪಿರಿಯಾಪಟ್ಟಣ ತಾಲೂಕು ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಗುರುವಾರ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರ ಗ್ರಾಮೀಣ ಮಕ್ಕಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದೆ. ಇದನ್ನು ಪ್ರಾಮಾಣಿಕತೆಯಿಂದ ಕಾರ್ಯರೂಪಕ್ಕೆ ತರುವುದರೊಂದಿಗೆ ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಬೇಕು. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಶಿಕ್ಷಕರು ಯಾವುದೇ ಲೋಪ ಎಸಗಬಾರದು. ಈ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯನಿರ್ವಹಿಸಲು ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು ಎಂದರು.
ಮಕ್ಕಳ ಮನಸ್ಸನ್ನು ಅರಿತು ಮಕ್ಕಳ ಮಟ್ಟಕ್ಕಿಳಿದು ಮಾರ್ಗದರ್ಶಕರಾಗಿ ನಿಂತಾಗ ಮಾತ್ರ ಶಿಕ್ಷಕರ ಪಾತ್ರ ಸಂಪೂರ್ಣವಾಗಿ ಯಶಸ್ವಿಯಾಗುತ್ತದೆ ಎಂದು ಲಿಲ್ಲಿ ಮೇರಿ ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಜಲೇಂದ್ರ ಮಾತನಾಡಿ, ಶಿಕ್ಷಕರು ಮಕ್ಕಳನ್ನು ದೇವರೆಂದು ತಿಳಿದರೆ ಸಾಲದು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಉತ್ತೇಜನ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ಅಂಥ ಮಕ್ಕಳಿಗೆ ಶಿಕ್ಷಕರೇ ದೇವರಾಗುತ್ತಾರೆ. ಈ ನಿಟ್ಟಿನಲ್ಲಿ ಶಿಕ್ಷಕರು ಗಮನಹರಿಸಬೇಕು ಎಂದು ತಿಳಿಸಿದರು.
ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳು ರಾಷ್ಟ್ರ ಪುರುಷರು ಮತ್ತು ವೀರ ವನಿತೆಯರ ವೇಷಭೂಷಣ ಧರಿಸಿ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಾಗಿದರು. ಎಸ್‌ಡಿಎಂಸಿ ಸದಸ್ಯರಾದ ರಾಜೇಂದ್ರ, ವಿಜಿ, ಕಾವ್ಯಾ ಸೇರಿದಂತೆ ಪಾಲಕರು ಮತ್ತು ಶಿಕ್ಷಕರು ಹಾಜರಿದ್ದರು.