ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಮೀನಾ ನಾಗರಾಜ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಗ್ರೋವರ್ಸ್‌ ಅಸೋಸಿಯೇಷನ್ ಹಾಗೂ ಬ್ಯಾಂಕರ್‌ಗಳ ಸಭೆ ನಡೆಯಿತು. ಡಾ. ಎಚ್.ಟಿ.ಮೋಹನ್‌ಕುಮಾರ್, ಪೂರ್ಣಿಮಾ, ಸುರೇಶ್ ಇತರರಿದ್ದರು. 
ನ್ಯೂಸ್

ಮಾನವೀಯತೆಯಿಂದ ರೈತರೊಂದಿಗೆ ವರ್ತಿಸಿ

ಜಿ. ಗಜೇಂದ್ರ

ಚಿಕ್ಕಮಗಳೂರು: ರೈತರ ಸಂಕಷ್ಟದ ಸಮಯದಲ್ಲಿ ಬ್ಯಾಂಕ್‌ಗಳು ಕಠಿಣವಾದ ಸಾಲ ವಸೂಲಾತಿ ಕ್ರಮ ಕೈಗೊಳ್ಳಬಾರದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ಗ್ರೋವರ್ಸ್‌ ಅಸೋಸಿಯೇಷನ್ ಹಾಗೂ ಬ್ಯಾಂಕರ್‌ಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಫೇಸಿ ಕಾಯ್ದೆ 2002ರಂತೆ ಈಗಿನ ಬರಗಾಲದ ಪರಿಸ್ಥಿತಿಯಲ್ಲಿ ವಸೂಲಾತಿಗೆ ಕಠಿಣ ಕ್ರಮ ಕೈಗೊಳ್ಳಬಾರದು. ಸ್ನೇಹಪರವಾಗಿ ವರ್ತಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.
ಬ್ಯಾಂಕ್‌ಗಳು ನಡೆಸುವ ಸಾಲ ಮೇಳದಲ್ಲಿ ಘರ್ ಘರ್ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಬೇಕು. ಅಲ್ಲದೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮಂಜೂರಾದ ಅರ್ಹರಿಗೆ ಸಾಲ ವಿತರಣೆ ಮಾಡಬೇಕು. ಯೋಜನೆಯಲ್ಲಿ 650 ಫಲಾನುಭವಿಗಳಿಗೆ ಬ್ಯಾಂಕ್‌ಗಳು ಸಾಲಸೌಲಭ್ಯ ಕಲ್ಪಿಸಿವೆ ಎಂದು ಹೇಳಿದರು.
ಕರ್ನಾಟಕ ಗ್ರೋವರ್ಸ್‌ ಫೆಡರೇಶನ್‌ನ ಡಾ. ಎಚ್.ಟಿ.ಮೋಹನ್‌ಕುಮಾರ್ ಮಾತನಾಡಿ, ಬರಗಾಲ ಪರಿಸ್ಥಿತಿಯಲ್ಲಿ ರೈತರಿಂದ ಸಾಲ ವಸೂಲಾತಿಗೆ ಕ್ರಮ ಕೈಗೊಳ್ಳಬಾರದು. ಒಟಿಎಸ್ (ಒನ್ ಟೈಮ ಸೆಟಲ್‌ಮೆಂಟ್)ನಲ್ಲಿ ರೈತರ ಸಾಲ ಕ್ಲಿಯರ್ ಮಾಡಿಸಿ ಮರು ಸಾಲದ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಹಾಗೂ ಗ್ರೀನ್ ಆರ್ಮಿ ಇಂಡಿಯಾದ ಸಿ.ಟಿ.ತುಳಸಿ ಗೌಡ ಮಾತನಾಡಿ, ಸರ್ಫೇಸಿ ಕಾಯ್ದೆಯನ್ನು ರದ್ದುಪಡಿಸಬೇಕು. ಕಂಪನಿಗಳಂತೆ ಬ್ಯಾಂಕ್‌ಗಳೂ ಗೂಂಡಾ ಪ್ರವೃತ್ತಿ ಬಿಟ್ಟು ರೈತರ ಪರವಾಗಿ ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಪೂರ್ಣಿಮಾ, ಕಾಫಿ ಬೆಳೆಗಾರರ ವಿವಿಧ ಸಂಘಗಳ ಅಧ್ಯಕ್ಷರು, ಸದಸ್ಯರು ಇದ್ದರು.