ನ್ಯೂಸ್

ಹುಲಿ ಉಗುರಿನ ಪ್ರಕರಣ; ಚಿಕ್ಕಮಗಳೂರಿನಲ್ಲಿ ಇಬ್ಬರು ಅರ್ಚಕರು ಅರೆಸ್ಟ್​

ಚಿಕ್ಕಮಗಳೂರು: ಕರ್ನಾಟಕದಲ್ಲಿ ಹುಲಿ ಉಗುರಿನ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಹುಲಿ ಉಗುರು ಹೊಂದಿರುವ ಆರೋಪದ ಮೇಲೆ ವರ್ತೂರು ಸಂತೋಷ್ ಅರೆಸ್ಟ್ ಆದ ಬಳಿಕ ಅನೇಕ ಸೆಲೆಬ್ರಿಟಿಗಳು ಸಂಕಷ್ಟದಲ್ಲಿದ್ದಾರೆ. ಇತ್ತ ಕಾಫಿನಾಡು ಚಿಕ್ಕಮಗಳೂರಿನ ಇಬ್ಬರು ಅಚರ್ಕರು ಹುಲಿ ಉಗುರು ಪ್ರಕರಣದಲ್ಲಿ ಅರೆಸ್ಟ್​​ ಆಗಿದ್ದಾರೆ.

ಬಂಧಿತ ಅರ್ಚಕರನ್ನು ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸ ಎಂದು ಗುರುತಿಸಲಾಗಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹುಲಿ ಉಗುರು  ಕಾರ್ಯಚರಣೆ ಮುಂದುವರೆದಿದ್ದು, ಹುಲಿ ಉಗುರಿನ ಡಾಲರ್ ಹಾಕಿಕೊಂಡಿದ್ದ ಇಬ್ಬರು ಅರ್ಚಕರನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು ಮೂರು ಹುಲಿ ಉಗುರನ್ನು ವಶಕ್ಕೆ ಪಡೆಯಲಾಗಿದೆ.

ಖಾಂಡ್ಯ ಮಾರ್ಕಾಂಡೇಶ್ವರ ದೇವಾಲಯದ ಇಬ್ಬರು ಅರ್ಚಕರನ್ನು ಬಾಳೆಹೊನ್ನೂರು ಅರಣ್ಯ ವಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿ ಇಬ್ಬರು ಅರ್ಚಕರನ್ನು ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರು ಅರ್ಚಕರ ವಿರುದ್ಧ ಬಾಳೆಹೊನ್ನೂರು ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರು ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಹುಲಿ ಉಗುರು ಪೆಂಡೆಂಟ್‌ ಧರಿಸಿದ್ದಾರೆನ್ನಲಾದ ನಟ ಜಗ್ಗೇಶ್‌, ದರ್ಶನ್‌ ತೂಗುದೀಪ, ರಾಕ್‌ಲೈನ್‌ ವೆಂಕಟೇಶ್‌ ಹಾಗೂ ನಿಖಿಲ್‌ ಕುಮಾರಸ್ವಾಮಿಗೂ ಸಂಕಷ್ಟ ಎದುರಾಗಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ: ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು, ಅಂದರೆ ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹ ತಪ್ಪು. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10000 ರೂ ದಂಡ ವಿಧಿಸುವ ಸಾಧ್ಯತೆ ಇದೆ.