ನ್ಯೂಸ್

ಕೃಷಿ ಸ್ನೇಹ ಮಾಡಿದಾಕೆಗೆ ದಶ ಕನಕ ಪದಕ ಮಾಲೆ

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವದಲ್ಲಿ ಈ ಬಾರಿ ಅತೀ ಹೆಚ್ಚು ಚಿನ್ನದ ಪದಕಗಳಿಗೆ (10) ಕೊರಳೊಡಿದ್ದ ಚಿಕ್ಕಮಗಳೂರಿನ ಬಾಲೆ ಸ್ನೇಹಶ್ರೀ ಅವರಿಗೆ ಅಭಿನಂದನೆಗಳ ಮಹಪೂರವೇ ಹರಿದುಬಂದಿದೆ.

ನಗರದ ಜಿಕೆವಿಕೆ ಕ್ಯಾಂಪಸ್​​ನ ಡಾ, ಬಾಬು ರಾಜೇಂದ್ರಪ್ರಸಾದ್ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ನಡೆದ ಘಟಿಕೋತ್ಸವದಲ್ಲಿ ಸ್ನೇಹಶ್ರೀ ಅವರಿಗೆ ರಾಜ್ಯಪಾಲ ಥಾವರ್​ ಚಂದ್​ ಗೆಹಲೋತ್​ ಅವರು ಪದವಿ ಸಹಿತ ಚಿನ್ನದ ಪದಕಗಳನ್ನು ಪ್ರದಾನಿಸಿದರು. ಕೃಷಿ ಸಚಿವ, ಕುಲಪತಿ ಸಹಿತ ಇತರ ಗಣ್ಯರು ಕೂಡ ಸ್ನೇಹಶ್ರೀ ಸಾಧನೆಗೆ ಬೆನ್ನು ತಟ್ಟಿದರು.

ಈ ಸಾಧನೆ ಹಿಂದೆ ಗುರುಗಳು, ಪಾಲಕರ ಬೆಂಬಲ ಅಧಿಕವಾಗಿತ್ತು. ಕೃಷಿಯಲ್ಲಿ ರೈತರಿಗೆ ಹೊಸ ತಂತ್ರಜ್ಞಾನಗಳನ್ನು ಸಂಶೋಧಿಸಬೇಕೆಂಬ ಅಭಿಲಾಷೆ ಹಾಗೂ ಕಠಿಣ ಪರಿಶ್ರಮದ ಓದು ಬಂಗಾರದ ಪದಕಗಳಿಗೆ ಕೊರಳೊಡ್ಡುವಂತೆ ಮಾಡಿತು ಎನ್ನುತ್ತಾರೆ ಸ್ನೇಹಶ್ರೀ.

ಸಿಇಟಿಯಲ್ಲಿ ವೈದ್ಯ ಸೀಟು ಸಿಕ್ಕಿತ್ತು. ಮನೆಯವರಿಗೂ ವೈದ್ಯೆಯಾಗಬೇಕೆಂಬ ಆಸೆಯಿತ್ತು. ಆದರೆ, ಭವಿಷ್ಯದಲ್ಲಿ ಐಎಎಸ್ ಪಾಸು ಮಾಡಿ ಕೃಷಿಕರ ಪರವಾದ ನೀತಿ-ನಿರೂಪಣೆ ಮಾಡುವ ಆಸೆಯೊಂದಿಗೆ ಕೃಷಿ ಪದವಿಯನ್ನು ಆಯ್ಕೆ ಮಾಡಿಕೊಂಡೆ. ಕೋರ್ಸ್ ಉದ್ದಕ್ಕೂ ವಿವಿಧ ಪ್ರಾಧ್ಯಾಪಕರ ಮಾರ್ಗದರ್ಶನ ನೆರವಿಗೆ ಬಂತು. ನನಗೆ ನಾನೇ ಪ್ರತಿಸ್ಪರ್ಧಿ ಎಂದು ಭಾವಿಸಿ ಏಕಾಗ್ರತೆ ಹಾಗೂ ನಿಖರ ಓದಿನತ್ತ ದೃಷ್ಟಿ ಹರಿಸಿದ್ದಕ್ಕೆ ಚಿನ್ನದ ಪದಕ ಪಡೆಯಲು ಸಾಧ್ಯವಾಯಿತು ಎಂದು ಅವರು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದರು.

ಅಂದ ಹಾಗೆ ಸ್ನೇಹಶ್ರೀ ಅವರು ಶಿಕ್ಷಕ ದಂಪತಿಯ ಪುತ್ರಿ ಎಂಬುದು ವಿಶೇಷ. ಇವರ ತಂದೆ ಸತೀಶ್​​ ಆರ್​ ಅವರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದಾರೆ. ತಾಯಿ ಕೂಡ ಸಖರಾಯಪಟ್ಟಣ ಸಮೀಪದ ಗುಬ್ಬಿಹಳ್ಳಿಯ ಸರ್ಕಾರಿ ಶಾಲೆಯ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.