ಚಿಕ್ಕಬಳ್ಳಾಪುರ : ಸೋಂಕಿತರ ಹೋಮ್ ಐಸೋಲೇಷನ್ ಬದಲು ಕೇರ್ ಸೆಂಟರ್‌ನಲ್ಲೇ ಚಿಕಿತ್ಸೆ ಹಾಗೂ ಸಂಪೂರ್ಣ ಲಾಕ್‌ಡೌನ್ ಜಾರಿ ಮೂಲಕ ಕರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವ ಜಿಲ್ಲಾಡಳಿತ, ಲಸಿಕೆ ಹಾಕುವ ವಿಚಾರದಲ್ಲೂ ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿದೆ. ಆದ್ಯತಾ ವಲಯಕ್ಕೆ ಮುಂದಿನ 4 ದಿನಗಳಲ್ಲಿ ಶೇ.100ರಷ್ಟು ಲಸಿಕೆ ಹಾಕಿಸಲು ಗಡುವು ವಿಧಿಸಿಕೊಂಡಿದೆ.
ಕರೊನಾ ಲಸಿಕಾಕರಣ ಅಭಿಯಾನದ ಅನುಷ್ಠಾನ, ಪ್ರಗತಿ ಮತ್ತು ನಿರೀಕ್ಷೆ, ಸಿಬ್ಬಂದಿ ಕಾರ್ಯನಿರ್ವಹಣೆ, ಲಸಿಕೆಗೆ ನಿಗದಿತ ಆದ್ಯತಾ ಗುಂಪು, ಎರಡನೇ ಡೋಸ್ ನಿರೀಕ್ಷೆಯಲ್ಲಿರುವವರ ಪಟ್ಟಿ, ಲಸಿಕೆ ದಾಸ್ತಾನು ಸಂಬಂಧಿಸಿದಂತೆ ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಆರ್.ಲತಾ, ಕ್ಷಿಪ್ರಗತಿಯಲ್ಲಿ ಅಭಿಯಾನದ ನಿಗದಿತ ಗುರಿ ಸಾಧಿಸಲು ಸೂಚಿಸಿದರು.
ಈಗಾಗಲೇ ಮೊದಲ ಡೋಸ್ ಲಸಿಕೆ ಪಡೆದು ನಿಗದಿತ ಅವಧಿ ಮುಗಿಸಿ, ಎರಡನೇ ಡೋಸ್ ಪಡೆಯಲು ಅರ್ಹರಿರುವವರಿಗೆ ಮೊದಲು ಆದ್ಯತೆ ನೀಡಬೇಕು, ಎರಡನೇ ಡೋಸ್ ಪಡೆಯಲಿರುವವರ ಮಾಹಿತಿ ಪಡೆದು ಅದರಂತೆ ನಿಗದಿತ ದಿನದಂದು ಕೇಂದ್ರಕ್ಕೆ ಕರೆಸಿಕೊಳ್ಳಬೇಕು. ಆಯಾ ಗ್ರಾಪಂನಲ್ಲಿನ ಕೇಂದ್ರಗಳಲ್ಲಿ ಮತ್ತು ನಗರ ಪ್ರದೇಶಗಳ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಆದ್ಯತೆ ಮೇಲೆ ಲಸಿಕೆ ಹಾಕುವಂತೆ ನಿರ್ದೇಶನ ನೀಡಿದರು.
18-44 ವಯೋಮಾನದವರ ಮೊದಲ ಡೋಸ್ ಲಸಿಕಾಕರಣಕ್ಕಾಗಿ ಸರ್ಕಾರ ಗುರುತಿಸಿರುವ 22 ಆದ್ಯತಾ ಗುಂಪಿನಲ್ಲಿರುವವರಿಗೆ ಹಾಗೂ ಈವರೆಗೆ ಲಸಿಕೆ ಪಡೆಯದ ಆರೋಗ್ಯ ಕಾರ್ಯಕರ್ತೆಯರು, ಕರೊನಾ ಮುಂಚೂಣಿ ಕಾರ್ಯಕರ್ತರಿಗೆ ಹಾಗೂ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಸರ್ಕಾರ ಸೂಚಿಸಿದೆ ಎಂಬುದನ್ನು ಡಿಸಿ ಮನವರಿಕೆ ಮಾಡಿದರು.
ಆಯಾ ಗುಂಪಿನ ನೋಡಲ್ ಅಧಿಕಾರಿಗಳು ಸಿಬ್ಬಂದಿಯ ಸಹಕಾರದೊಂದಿಗೆ ಗುರಿ ತಲುಪಬೇಕಿದೆ, ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆಯ ನೀಡುವ ಜತೆಯಲ್ಲಿಯೇ ಲಸಿಕೆ ಅಭಿಯಾನವನ್ನೂ ಸಹ ಚುರುಕಾಗಿ ಕೈಗೊಳ್ಳಬೇಕು. ಆಗ ಮಾತ್ರ ಜಿಲ್ಲೆಯಲ್ಲಿ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟ ಲತಾ, ಲಸಿಕೆ ಪಡೆಯುವ ಆಧ್ಯತಾವರ್ಗದ ಜನರಲ್ಲಿ ಗೊಂದಲಗಳಿದ್ದಲ್ಲಿ ನೋಡಲ್ ಅಧಿಕಾರಿಗಳನ್ನು ದೂರವಾಣಿ ಇಲ್ಲವೇ ನೇರವಾಗಿ ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಮನವಿ ಮಾಡಿದರು.
ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಯಲ್ಲಾ ರಮೇಶ್ ಬಾಬು, ಮಕ್ಕಳ ಸಂರಕ್ಷಣಾಧಿಕಾರಿ ಚನ್ನಕೇಶವ ರೆಡ್ಡಿ ಇತರರಿದ್ದರು.
ವ್ಯಾಪಕ ಪ್ರಚಾರಕ್ಕೆ ಸೂಚನೆ : ನಿಗದಿತ ದಿನಗಳಂದು ಎಲ್ಲ ಆರೋಗ್ಯ ಕಾರ್ಯಕರ್ತೆಯರು, ಮುಂಚೂಣಿ ಕಾರ್ಯಕರ್ತರು ಮತ್ತು 45 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಗ್ರಾಪಂ ಹಾಗೂ ನಗರ ವ್ಯಾಪ್ತಿ ಪ್ರದೇಶಗಳಲ್ಲಿ ಲಸಿಕಾಕರಣ ಕೈಗೊಳ್ಳುವ ಮೊದಲು ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಫಲಾನುಭವಿಗಳಿಗೆ ಲಸಿಕೆ ಹಾಕುವ ದಿನ, ಸ್ಥಳ ಮತ್ತು ಲಸಿಕೆಯ ಮಹತ್ವದ ಬಗ್ಗೆ ತಿಳಿಸಲು ಟಾಂಟಾಂ ಮೂಲಕ ಡಂಗೂರ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಅಧಿಕಾರಿಗಳಿಗೆ ಸೂಚಿಸಿದರು.
ನೋಡಲ್ ಅಧಿಕಾರಿಗಳು ನೇಮಕ : ಆದ್ಯತಾ ಗುಂಪಿನ ಫಲಾನುಭವಿಗಳ ಲಸಿಕಾಕರಣದ ಮೇಲುಸ್ತುವಾರಿಗೆ ಜಿಲ್ಲೆಯಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಂಗವಿಕಲರಿಗೆ, ಕೈದಿಗಳಿಗೆ, ಚಿತಾಗಾರ ಸಿಬ್ಬಂದಿ ಹಾಗೂ ಸ್ವಸಹಾಯಕರ ಗುಂಪಿಗೆ ಆರೋಗ್ಯ ಕಾರ್ಯಕರ್ತರ ನಿಕಟ ಕುಟುಂಬಸ್ಥರಿಗೆ, ಕರೊನಾ ನಿಯಂತ್ರಣ ಕರ್ತವ್ಯನಿರತ ಶಿಕ್ಷಕರಿಗೆ, ಸಾರಿಗೆ, ಬೆಸ್ಕಾಂ, ಅಂಚೆ ಇಲಾಖೆ ನೌಕರರು, ಆಟೋ ಮತ್ತು ಕ್ಯಾಬ್ ಚಾಲಕರು, ಬೀದಿ ಬದಿಯ ವ್ಯಾಪಾರಸ್ಥರು, ಭದ್ರತೆ ಮತ್ತು ಕಚೇರಿಗಳ ಹೌಸ್ಕೀಪಿಂಗ್ ಸಿಬ್ಬಂದಿ, ನ್ಯಾಯಾಂಗ ಅಧಿಕಾರಿಗಳು, ವೃದ್ಧರು/ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರ ಆರೈಕೆದಾರರಿಗೆ, ಪತ್ರಕರ್ತರಿಗೆ, ಆಸ್ಪತ್ರೆಗಳಿಗೆ ಸರಕು ಸರಬರಾಜು ಮತ್ತು ಔಷಧ ತಯಾರಿಸುವ ಕಂಪನಿ ಸಿಬ್ಬಂದಿ, ಆಯಿಲ್ ಇಂಡಸ್ಟ್ರಿ ಮತ್ತು ಗ್ಯಾಸ್ ಸಿಬ್ಬಂದಿ, ಭಾರತೀಯ ಆಹಾರ ನಿಗಮ ಸಿಬ್ಬಂದಿ, ಎಪಿಎಂಸಿ ಸಿಬ್ಬಂದಿ ಸೇರಿ ಆದ್ಯತಾ ಗುಂಪಿನ ಫಲಾನುಭವಿಗಳಿಗೆ ಆಯಾ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ವಿಶೇಷ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.