ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ವಿಚಾರ ಎಲ್ಲರಿಗೂ ತಿಳಿದಿರುವುದೇ. ಇದೇ ಮೊದಲ ಬಾರಿಗೆ ಜನ ಪ್ರತಿನಿಧಿಯೊಬ್ಬರು `ಬಿಗ್‌ಬಾಸ್' ಮನೆ ಪ್ರವೇಶಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದ್ದವು. ಅಷ್ಟೇ ಅಲ್ಲ, ಶೋನಲ್ಲಿ ಶಾಸಕರು ಅತಿಥಿಯೋ ಅಥವಾ ಸ್ಪರ್ಧಿಯೋ ಎಂಬ ವಾದ ಕೂಡ ಆರಂಭವಾಗಿತ್ತು. ಎರಡು-ಮೂರು ತಿಂಗಳು ಅವರು 'ಬಿಗಬಾಸ್' ಮನೆಯಲ್ಲಿ ಇದ್ದರೆ ಬರಪೀಡಿತ ಜಿಲ್ಲೆಯ ಗತಿ ಏನು? ಎಂದು ರಾಜಕೀಯ ವಿರೋಧಿಗಳು ವಾಗ್ದಾಳಿ ಶುರು ಮಾಡಿದ್ದರು.
ಆದರೀಗ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಯಿಂದ ಹೊರಬಂದಿರುವುದಲ್ಲದೇ, ತಾವು ಬಿಗ್ ಬಾಸ್ ಮನೆಗೆ ಹೋದ ಹಿಂದಿನ ಉದ್ದೇಶವನ್ನು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಹೌದು, ಪ್ರದೀಪ್ ಎಲ್ಲರನ್ನೂ ತಾವು ಸ್ಪರ್ಧಿ ಎಂದೇ ನಂಬಿಸಿದ್ದರು. ಆದರೆ ಬಿಗ್ ಬಾಸ್ ಮನೆಗೆ ಹೋಗಿ ಕೆಲ ಹೊತ್ತಿನ ಬಳಿಕ ಬಿಗ್ ಬಾಸ್ ಮಾತನಾಡಿ, ಪ್ರದೀಪ್ ಈ ಸೀಸನ್‌ನ ಮೊದಲ ಅತಿಥಿ ಎಂದು ತಿಳಿಸಿದರು.
ಆ ನಂತರ ಪ್ರದೀಪ್ ಕಂಟೆಸ್ಟಂಟ್ಸ್‌ಗೆ ಟಾಸ್ಕ್ ಆಡಿಸಿ ಸಿಹಿ ನೀಡಿದರು. ಕೊನೆಗೆ ಪ್ರದೀಪ್ ಈಶ್ವರ್ ಬಿಗ್ ಬಾಸ್ ಆದೇಶದಂತೆ ಮನೆಯಿಂದ ಹೊರಬಂದರು.
ರಾಜಕಾರಣಿ ಮಾತ್ರವಲ್ಲದೇ, ಮೋಟಿವೇಷನಲ್ ಸ್ಪೀಕರ್ ಆಗಿ ಗುರುತಿಸಿಕೊಂಡಿರುವ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಉತ್ಸಾಹ ತುಂಬಿದ್ದಾರೆ. ತಮ್ಮ ಮಾತಿನ ಮೂಲಕ ಸ್ಪರ್ಧಿಗಳ ಮನಸ್ಸಿನ ಮೇಲೆ ಪ್ರಭಾವ ಬೀರಿದ್ದಾರೆ.
ಆಪ್ತರು ಹೇಳಿದ್ದೇನು?
ಈ ರಿಯಾಲಿಟಿ ಷೋ ನಡೆಸಿಕೊಡುವ ನಟ ಕಿಚ್ಚ ಸುದೀಪ್ ಮತ್ತು ಪ್ರದೀಪ್ ಚಿರಪರಿಚಿತರು. ಈ ಕಾರಣದಿಂದ ಶಾಸಕರು ಬಿಗ್ ಬಾಸ್ ಮನೆಯಲ್ಲಿ ಪಾಲ್ಗೊಂಡಿದ್ದರು ಎಂದು ಶಾಸಕರ ಆಪ್ತರು ಹೇಳಿದ್ದರು. ಏತನ್ಮಧ್ಯೆ 'ಈ ಷೋನಿಂದ ಬರುವ ಹಣವನ್ನು ಅನಾಥ ಮಕ್ಕಳಿಗೆ ನೀಡುವೆ' ಎಂದು ಬಿಗ್‌ಬಾಸ್ ಮನೆಯಲ್ಲಿ ಪ್ರದೀಪ್ ತಿಳಿಸಿದ್ದಾರೆ.