ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಶಿವಾಜಿನಗರದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ ಪ್ರಸಂಗ ನಡೆಯಿತು.
ಸಿಎಂ ಸಿದ್ದರಾಮಯ್ಯ ಭಾಷಣ ನಿಲ್ಲಿಸಲು ಕಾರಣವಾಗಿದ್ದು ಆಜಾನ್ (ನಮಾಜ್). ಸಿದ್ದರಾಮಯ್ಯನವರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಆಜಾನ್ ಪ್ರಾರಂಭವಾದ ಹಿನ್ನೆಲೆಯಲ್ಲಿ 5 ನಿಮಿಷ ಭಾಷಣ ನಿಲ್ಲಿಸಿ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಇದ್ದವರೂ ಮೌನಕ್ಕೆ ಶರಣಾದರು. ಆಜಾನ್ ಮುಗಿದ ನಂತರ ಸಿದ್ದರಾಮಯ್ಯ ಭಾಷಣವನ್ನು ಮುಂದುವರಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಇಂದು (ಆಗಸ್ಟ್ 2) ಬೆಂಗಳೂರಿನ ಶಿವಾಜಿನಗರದ ಬ್ರಾಡ್ವೇ ರಸ್ತೆಯಲ್ಲಿರುವ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದರು.
ಶಿವಾಜಿನಗರದಲ್ಲಿರುವ ಈ ಆಸ್ಪತ್ರೆಯು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಅಧೀನದಲ್ಲಿದ್ದು ಇಂದು ಇದನ್ನು ಇಂದು ಅಧಿಕೃತವಾಗಿ ಮುಖ್ಯಮಂತ್ರಿ, ಡಿಸಿಎಂ ಸೇರಿದಂತೆ ಸಚಿವರು ಶಾಸಕರು ಸೇರಿಕೊಂಡು ಉದ್ಘಾಟಿಸಿದರು.
24.38 ಕೋಟಿ ರೂ,ವೆಚ್ಚದಲ್ಲಿ ಬಿಬಿಎಂಪಿ ವತಿಯಿಂದ 2020ರಲ್ಲಿ ನಿರ್ಮಿಸಲಾಗಿದ್ದ ಈ ಆಸ್ಪತ್ರೆಗೆ ವೈದ್ಯರು ಹಾಗೂ ಸಿಬ್ಬಂದಿಯ ನೇಮಕಾತಿ ಆಗಿರಲಿಲ್ಲ. ಇದರಿಂದ ಕಾರ್ಯಾರಂಭಗೊಂಡಿರಲಿಲ್ಲ. ಈಗ ಆಸ್ಪತ್ರೆಗೆ ಅಗತ್ಯ ವೈದ್ಯರು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಐಸಿಯುದಲ್ಲಿನ 20 ಹಾಸಿಗೆಗಳು ಸೇರಿ ಒಟ್ಟು 130 ಹಾಸಿಗೆಗಳ 4 ಮಹಡಿಗಳ ಈ ಆಸ್ಪತ್ರೆ ಒಳಗೊಂಡಿದೆ.