ವಿಷಮುಕ್ತ ಪುಣ್ಯಸ್ನಾನ ಅಭಿಯಾನದ ನಿಮಿತ್ತ ಏರ್ಪಡಿಸಿದ್ದ ಸಭೆಯಲ್ಲಿ ಪ್ರೊ. ಬಿ.ಎಂ.ಕುಮಾರಸ್ವಾಮಿ, ಎಂ.ಶಂಕರ್, ಬಾಲಕೃಷ್ಣ ನಾಯ್ಡು, ರತ್ನಮ್ಮ, ಅನ್ನಪೂರ್ಣ, ಶ್ರೀನಿವಾಸ್, ಲಕ್ಷ್ಮಣಪ್ಪ ಇದ್ದರು. 
ನ್ಯೂಸ್

ಕೂಡಲಿಯಲ್ಲಿ ಸ್ನಾನಕ್ಕೆ ಕಡಲೆ ಹಿಟ್ಟು!

ಶಿವಮೊಗ್ಗ: ಮಕರ ಸಂಕ್ರಾಂತಿಯಂದು ಸಾವಿರಾರು ಜನ ಕೂಡಲಿಯ ತುಂಗಾ-ಭದ್ರಾ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಆಗಮಿಸುತ್ತಾರೆ. ಇವರಿಗೆ ನದಿಯ ಪಾವಿತ್ರೃ ಮತ್ತು ಶುದ್ಧತೆ ಬಗ್ಗೆ ಅರಿವು ಮೂಡಿಸಲು ವಿಷಮುಕ್ತ ಪುಣ್ಯಸ್ನಾನ ಅಭಿಯಾನವನ್ನು ವರದಶ್ರೀ ಫೌಂಡೇಶನ್, ನಿರ್ಮಲ ತುಂಗಭದ್ರಾ ಅಭಿಯಾನದ ತಂಡ, ಕೂಡಲಿ ಗ್ರಾಪಂ ಹಾಗೂ ಮತ್ತಿತರ ಸಂಘ ಸಂಸ್ಥೆಗಳು ಹಮ್ಮಿಕೊಂಡಿವೆ.

ಸೋಮವಾರ ಕೂಡಲಿಯಲ್ಲಿ ಏರ್ಪಡಿಸಿದ್ದ ಅಭಿಯಾನದ ಸಭೆಯಲ್ಲಿ ಈ ವಿಷಯ ತಿಳಿಸಿದ ನಿರ್ಮಲ ತುಂಗಾ ಅಭಿಯಾನದ ಸಂಚಾಲಕ ಪ್ರೊ. ಬಿ.ಎಂ.ಕುಮಾರಸ್ವಾಮಿ, ನದಿ ನೀರಿಗೆ ಶಾಂಪೂ, ಸಾಬೂನು ಮುಂತಾದ ರಾಸಾಯನಿಕಗಳನ್ನು ಸೇರಿಸದೆ ಪುಣ್ಯಸ್ನಾನ ಮಾಡುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ನದಿಯ ನೀರನ್ನು ಕಾಪಾಡೋಣ ಎಂದು ಹೇಳಿದರು.

ಜ.14ರ ಬೆಳಗ್ಗೆ 6.30ಕ್ಕೆ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್ ಹಾಗೂ ಶಾಸಕ ಡಾ. ಧನಂಜಯ ಸರ್ಜಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ವರದಶ್ರೀ ಫೌಂಡೇಶನ್‌ನಿಂದ ಕಡಲೆ ಹಿಟ್ಟಿನ 25 ಸಾವಿರ ಪ್ಯಾಕ್‌ಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಪರ್ಯಾವರಣ ಟ್ರಸ್ಟ್, ಸರ್ಜಿ ಫೌಂಡೇಶನ್, ಐಲೈಫ್ ಶಿವಮೊಗ್ಗ, ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್, ಸನ್‌ರೈಸ್ ಸೆಕ್ಯೂರಿಟೀಸ್ ಸೇರಿ ಹಲವಾರು ಸಂಸ್ಥೆಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಈ ಅಭಿಯಾನದಲ್ಲಿ ಕೈ ಜೋಡಿಸಲಿದ್ದಾರೆ ಎಂದರು.

ಪ್ರಮುಖರಾದ ಎಂ.ಶಂಕರ್, ಬಾಲಕೃಷ್ಣ ನಾಯ್ಡು, ಕೂಡಲಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಅನ್ನಪೂರ್ಣ, ಕಾರ್ಯದರ್ಶಿ ಲಕ್ಷ್ಮಣಪ್ಪ, ಸದಸ್ಯೆ ಮಂಜುಳಾ, ಮಾಜಿ ಸದಸ್ಯ ವಾಗೀಶ್, ಪಿಡಿಒ ಶ್ರೀನಿವಾಸ್ ಮುಂತಾದವರು ಈ ಸಂದರ್ಭದಲ್ಲಿದ್ದರು.