ನ್ಯೂಸ್

ಚಿಕನ್​​​ನಲ್ಲಿ ಬೇರೆ ಏನ್ ಮಾಡಬಹುದು ಅಂತ ಯೋಚನೆ ಮಾಡ್ತಿದ್ರೆ ರುಚಿಕರವಾದ ಚಿಕನ್ ಸುಕ್ಕಾ ಟ್ರೈ ಮಾಡಿ ನೋಡಿ... Chicken Sukka

Chicken Sukka : ಸಾಮಾನ್ಯವಾಗಿ ರಜೆಯ ದಿನಗಳಲ್ಲಿ ಎಲ್ಲರೂ ರುಚಿಕರವಾದ ಊಟ ಮಾಡಿದ ಬಳಿಕ ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಅದರಲ್ಲೂ ಮಾಂಸಾಹಾರಿಗಳಿಗೆ ಚಿಕನ್ ತುಂಬಾ ಅಚ್ಚುಮೆಚ್ಚು. ಮನೆಯಲ್ಲಿರುವ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಹೆಚ್ಚಿನ ಜನರು ಚಿಕನ್ ತಿನ್ನಲು ಇಷ್ಟಪಡುತ್ತಾರೆ.

ಭಾನುವಾರ ಅಥವಾ ಇನ್ಯಾವುದೇ ವಿಶೇಷ ದಿನ ಬರಲಿ ರುಚಿಕರವಾದ ಚಿಕನ್​ ಖಾದ್ಯ ಮಾಡಲು ಬಯಸುತ್ತಾರೆ. ಅದರಲ್ಲೂ ಒಂದೇ ರೀತಿಯ ಚಿಕನ್​ ಖಾದ್ಯ ತಿಂದು ತಿಂದು ಬೋರ್​ ಆದ ಮಂದಿ ಹೊಸ ರೀತಿಯ ಚಿಕನ್​ ರೆಸಿಪಿ ಟ್ರೈ ಮಾಡುತ್ತಾರೆ. ಹೈದರಾಬಾದಿ ಚಿಕನ್​ ರೆಸಿಪಿ, ಆಂಬೂರ್​ ಬಿರಿಯಾನಿ, ಕೊಲ್ಲಾಪುರಿ ಚಿಕನ್​ ಕರಿ ಹೀಗೆ ನಾನಾ ರೀತಿಯ ಚಿಕನ್​ ರೆಸಿಪಿಗಳಿವೆ. ಯೂಟ್ಯೂಬ್​ ಸೇರಿದಂತೆ ಅನೇಕ ಜಾಲತಾಣಗಳಲ್ಲಿ ಅಡುಗೆ ಕುರಿತು ಲಭ್ಯವಿರುವ ಅನೇಕ ವಿಡಿಯೋ ಹಾಗೂ ಪೋಸ್ಟ್​ಗಳನ್ನು ನೋಡಿ ಚಿಕನ್​ ರೆಸಿಪಿ ಟ್ರೈ ಮಾಡಿದ ಅನೇಕ ಮಂದಿಯನ್ನು ನಾವು ನೋಡಿದ್ದೇವೆ. ನೀವು ಕೂಡ ಟ್ರೈ ಮಾಡುತ್ತೀರಿ.

ಇದೀಗ ಹೊಸದಾಗಿ ಏನಾದರೂ ಟ್ರೈ ಮಾಡಬೇಕು ಅಂತಾ ನೀವು ಬಯಸಿದ್ದರೆ ಸಖತ್​ ರುಚಿಕರವಾದ ಚಿಕನ್​ ಸುಕ್ಕಾವನ್ನು ಒಮ್ಮೆ ಟ್ರೈ ಮಾಡಿ ನೋಡಿ. ಈ ಚಿಕನ್ ಸುಕ್ಕಾ ಅನ್ನ, ಚಪಾತಿ, ಪೂರಿ, ಇಡ್ಲಿ, ದೋಸೆ ಮತ್ತು ಎಲ್ಲದರ ಜೊತೆಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ ಮತ್ತು ಸಖತ್​ ಟೇಸ್ಟಿಯಾಗಿರುತ್ತದೆ. ಹಾಗಾದರೆ, ಚಿಕನ್​ ಸುಕ್ಕಾವನ್ನು ಮಾಡುವುದು ಹೇಗೆ ಎಂದು ನಾವೀಗ ತಿಳಿದುಕೊಳ್ಳೋಣ.

ಚಿಕನ್​​ ಮ್ಯಾರಿನೇಟ್​ ಮಾಡಲು ಬೇಕಾದ ಪದಾರ್ಥಗಳು

* ಕೋಳಿ - 1 ಕೆಜಿ

* ಮೆಣಸಿನ ಪುಡಿ - 1½ ಚಮಚ

* ಅರಿಶಿನ ಪುಡಿ - 3 ಚಿಟಿಕೆ

* ಕೊತ್ತಂಬರಿ ಪುಡಿ - 1 ಚಮಚ

* ಗರಂ ಮಸಾಲ - ½ ಚಮಚ

* ಮೆಣಸಿನ ಪುಡಿ - ½ ಚಮಚ

* ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ

* ಮೊಸರು - 1 ಚಮಚ

* ಉಪ್ಪು - ಅಗತ್ಯವಿರುವಂತೆ

* ನಿಂಬೆ - ½

ಫ್ರೈ ಮಾಡಿ, ರುಬ್ಬಲು ಬೇಕಾದ ಪದಾರ್ಥಗಳು

* ಲವಂಗ- 3

* ಮಸಲಾ ಚಕ್ಕೆ- 1 ತುಂಡು

* ಕೊತ್ತಂಬರಿ ಸೊಪ್ಪು - 1 ಚಮಚ

* ಮೆಣಸು - 1 ಚಮಚ

* ಜೀರಿಗೆ - 1 ಚಮಚ

* ಒಣ ಮೆಣಸಿನಕಾಯಿ- 3

ಚಿಕನ್​ ಮಾಡಲು ಬೇಕಾದ ಪದಾರ್ಥಗಳು

* ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು

* ಬೆಳ್ಳುಳ್ಳಿ - 5 ಎಸಳು

* ಶುಂಠಿ - 1 ತುಂಡು

* ಕರಿಬೇವು - 2 ಕಟ್ಟುಗಳು

ತಯಾರಿಸುವ ವಿಧಾನ

ಮೊದಲು, ಒಂದು ಬಟ್ಟಲಿನಲ್ಲಿ, ಚಿಕನ್, ಮೆಣಸಿನ ಪುಡಿ, ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ, ಮೆಣಸಿನ ಪುಡಿ, ಶುಂಠಿ ಪೇಸ್ಟ್, ಮೊಸರು, ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ 15 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ. ಇದಾದ ಬಳಿಕ, ಒಂದು ಪ್ಯಾನ್​​ನಲ್ಲಿ ಲವಂಗ, ಏಲಕ್ಕಿ, ಕೊತ್ತಂಬರಿ, ಮೆಣಸು, ಜೀರಿಗೆ ಮತ್ತು ಒಣ ಮೆಣಸಿನಕಾಯಿಗಳನ್ನು ಹಾಕಿ, ಗೋಲ್ಡನ್ ಬ್ರೌನ್ ರವರೆಗೆ ಹುರಿದು, ತಣ್ಣಗಾಗಿಸಿ. ಬಳಿಕ ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಸ್ವಲ್ಪ ನೀರು ಸೇರಿಸಿ, ಪೇಸ್ಟ್ ರೀತಿ ರುಬ್ಬಿಕೊಳ್ಳಿ.

ಇದಾದ ನಂತರ, ಒಂದು ಪ್ಯಾನ್‌ಗೆ ಎಣ್ಣೆ ಹಾಕಿ ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಚೆನ್ನಾಗಿ ಹುರಿಯಿರಿ. ನಂತರ ನೀವು ಚಿಕನ್ ಹುರಿಯಲು ಬಳಸಿದ ಅದೇ ಎಣ್ಣೆಗೆ ಜೀರಿಗೆ, ಕತ್ತರಿಸಿದ ಶುಂಠಿ, ಬೆಳ್ಳುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಕರಿಬೇವು ಸೇರಿಸಿ. ಅದರ ಜೊತೆ ರುಬ್ಬಿದ ಮಸಾಲೆಗಳನ್ನೂ ಸೇರಿಸಿ. ಎಣ್ಣೆ ಬೇರ್ಪಟ್ಟು ಗಟ್ಟಿಯಾಗುವವರೆಗೂ ಹುರಿಯಿರಿ. ಬಣ್ಣ ಬದಲಾದ ನಂತರ, ಹುರಿದ ಕೋಳಿ ಮಾಂಸ ಮತ್ತು ಉಪ್ಪನ್ನು ಸೇರಿಸಿ, ಬೆರೆಸಿ ಸುಮಾರು 5 ನಿಮಿಷ ಬೇಯಿಸಿ. ಇದಾದ ನಂತರ ನಿಮ್ಮ ರುಚಿಕರವಾದ ಚಿಕನ್ ಸುಕ್ಕಾ ಸವಿಯಲು ಸಿದ್ಧವಾಗುತ್ತದೆ.