ನವದೆಹಲಿ: ದೇಶಾದ್ಯಂತ ಚಿಕನ್ ಬೆಲೆ ದಿನದಿಂದ ದಿನಕ್ಕೆ ಗಗನಮುಖಿ ಆಗುತ್ತಿದೆ. ಒಂದು ಕೆಜಿ ಚಿಕನ್ಗೆ 250 ರಿಂದ 270 ರೂಪಾಯಿ ಇದೆ. ಇಂಧನ ದರ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದು, ಈಗಾಗಲೇ ಜನರು ಸಂಕಷ್ಟದಲ್ಲಿದ್ದಾರೆ. ಇದರ ನಡುವೆ ಚಿಕನ್ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿರುವುದು ಮಾಂಸಪ್ರಿಯರಿಗೆ ಆಘಾತವಾಗಿದೆ.
ಲಾಕ್ಡೌನ್ಗೂ ಮುಂಚೆ ಒಂದು ಕೆಜಿ ಚಿಕನ್ ಬೆಲೆ 120 ರೂಪಾಯಿ ಇತ್ತು. ಮೇ ತಿಂಗಳಲ್ಲಿ ಚಿಕನ್ ಬೆಲೆ 160 ರಿಂದ 180ಕ್ಕೆ ಏರಿಕೆಯಾಗಿದೆ. ಅಂದಿನಿಂದ ಏರಿಕೆ ಕಾಣುತ್ತಲೇ ಇದೆ. ಜೂನ್ನಲ್ಲಿ ಚಿಕನ್ ಬೆಲೆ ಗರಿಷ್ಠ 200 ರೂ. ಮುಟ್ಟಿದೆ. ಆದರೆ, ಜುಲೈನಲ್ಲಿ ಅದರ ಬೆಲೆಯಲ್ಲಿ ತುಂಬಾ ಏರಿಕೆಯಾಗಿದ್ದು, ಸದ್ಯ ಒಂದು ಕೆಜಿ ಚಿಕನ್ ಬೆಲೆ 250 ರಿಂದ 270 ರೂ.ವರೆಗೆ ಮಾರಾಟವಾಗುತ್ತಿದೆ.
ಬೇಸಿಗೆಯಲ್ಲಿ ಸಾಮಾನ್ಯವಾಗಿ ಕೋಳಿ ಉತ್ಪಾದನೆ ಕಡಿಮೆ ಇರುತ್ತದೆ. ಇದಲ್ಲದೆ, ಬಹುರಾಷ್ಟ್ರೀಯ ಸಂಸ್ಥೆಗಳು ಕೃತಕ ಕೊರತೆಯನ್ನು ಸೃಷ್ಟಿಸುತ್ತಿವೆ. ಇದರೊಂದಿಗೆ ಲಾಕ್ಡೌನ್ ಸಮಯದಲ್ಲಿ ಕೋಳಿಗಳ ಉತ್ಪಾದನೆಯು ಕಡಿಮೆ ಇತ್ತು. ಇದೀಗ ಕರೊನಾ ಲಾಕ್ಡೌನ್ ಸಡಿಲಗೊಂಡಿದ್ದು, ಹೋಟೆಲ್, ರೆಸ್ಟೋರೆಂಟ್ ಓಪನ್ ಆಗಿರುವುದರಿಂದ ಮಾಂಸಾಹಾರಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಚಿಕನ್ ಕೊರತೆಗೆ ಕಾರಣವಾಗಿದೆ.
ಹೀಗಾಗಿ ಸಹಜವಾಗಿಯೇ ಚಿಕನ್ ಬೆಲೆಯಲ್ಲಿ ಏರಿಕೆ ಆಗಿದೆ. ಸದ್ಯ ಚಿಕನ್ ಬೆಲೆ ಕೇಳಿದರೆ ಗ್ರಾಹಕರು ಹೆದರುವಂತಿದೆ. ಮುಂದಿನ ದಿನಗಳಲ್ಲಿ ಇದರ ಬೆಲೆ ಕಡಿಮೆ ಆಗುವ ಲಕ್ಷಣಗಳು ಇವೆ. (ಏಜೆನ್ಸೀಸ್)