ದಾಂತೇವಾಡ: ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯ ಅಬುಜ್‌ಮದ್‌ನಲ್ಲಿ ನಡೆದ ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ 14 ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಈ ಘಟನೆಯ ಸ್ಥಳದಿಂದ ಪೊಲೀಸರು ಅಪಾರ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಛತ್ತೀಸ್‌ಗಢದ ದಾಂತೇವಾಡದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 14 ನಕ್ಸಲೀಯರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಖಚಿತ ಪಡಿಸಿದ್ದಾರೆ.
ಛತ್ತೀಸ್‌ಗಢದ ದಾಂತೇವಾಡ ಮತ್ತು ನಾರಾಯಣಪುರದ ಜಿಲ್ಲಾ ಮೀಸಲು ಗಾರ್ಡ್‌ಗಳು (ಡಿಆರ್‌ಜಿ), ಅಬುಜ್‌ಮದ್‌ನಲ್ಲಿ ನಕ್ಸಲರು ಇರುವುದರ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ. ಅಬುಜ್‌ಮದ್‌ನ ದಕ್ಷಿಣ ಭಾಗದಲ್ಲಿರುವ ತುಲ್ತುಲಿ ಗ್ರಾಮದಲ್ಲಿ ಎನ್‌ಕೌಂಟರ್ ನಡೆದಿದೆ. ಈ ಗ್ರಾಮವು ದಾಂತೇವಾಡದಿಂದ ಸುಮಾರು 40 ರಿಂದ 50 ಕಿಮೀ ದೂರದಲ್ಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರೈ ತಿಳಿಸಿದ್ದಾರೆ.
ಎನ್‌ಕೌಂಟರ್ ಸ್ಥಳದಿಂದ ಎಕೆ 47 ರೈಫಲ್ ಮತ್ತು ಸ್ವಯಂ-ಲೋಡಿಂಗ್ ರೈಫಲ್ (ಎಸ್‌ಎಲ್‌ಆರ್) ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಹೆಚ್ಚಿನ ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ.
ಈ ಕಾರ್ಯಾಚರಣೆ ಮುಂದುವರಿದಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯೊಂದಿಗೆ ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ಗಳಲ್ಲಿ ಈ ವರ್ಷ ಇದುವರೆಗೆ 167 ನಕ್ಸಲೀಯರು ಹತರಾಗಿದ್ದಾರೆ. ಗೋವಾದ ಗಾತ್ರದ ಅಬುಜ್ಮದ್ ಪ್ರದೇಶವನ್ನು ನಕ್ಸಲೀಯರ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಕಳೆದ ಸೆಪ್ಟೆಂಬರ್ 3 ರಂದು ದಾಂತೇವಾಡ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿ ಆರು ಮಹಿಳೆಯರು ಸೇರಿದಂತೆ ಒಂಬತ್ತು ಮಾವೋವಾದಿಗಳು ಹತ್ಯೆಗೀಡಾಗಿದ್ದರು.
ಕಳೆದ ಸೆಪ್ಟೆಂಬರ್ 3 ರಂದು ದಾಂತೇವಾಡ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿ ಆರು ಮಹಿಳೆಯರು ಸೇರಿದಂತೆ ಒಂಬತ್ತು ಮಾವೋವಾದಿಗಳನ್ನು ಎನ್‌ಕೌಂಟರ್ ಮಾಡಲಾಗಿತ್ತು ಎಂದು ವರದಿಯಾಗಿದೆ.