ನ್ಯೂಸ್

ನಿರಂತರ ಮಳೆಗೆ ತತ್ತರಿಸಿದ ಹಿಮಾಚಲ ಪ್ರದೇಶಕ್ಕೆ 11 ಕೋಟಿ ರೂ. ಆರ್ಥಿಕ ನೆರವು ಘೋಷಿಸಿದ ಛತ್ತೀಸ್‌ಗಢ ಸಿಎಂ!

ಛತೀಸ್​​ಗಢ: ಕಳೆದ ತಿಂಗಳಿನಿಂದ ಉತ್ತರಾಖಂಡ, ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಹಲವು ಸ್ಥಳಗಳಲ್ಲಿ ಪ್ರವಾಹದ ಪರಿಸ್ಥಿತಿ ಮತ್ತು ಭೂಕುಸಿತ ಉಂಟಾಗಿದೆ. ಇದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಗೆ ತತ್ತರಿಸಿದ ಹಿಮಾಚಲ ಪ್ರದೇಶಕ್ಕೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಇಂದು 11 ಕೋಟಿ ರೂ. ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೇಲ್ ಅವರು ಗುರುವಾರ (ಆಗಸ್ಟ್​ 17) ಹಿಮಾಚಲ ಪ್ರದೇಶದ ಕೌಂಟರ್‌ಪರ್ ಸುಖ್ವಿಂದರ್ ಸಿಂಗ್ ಸುಖು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು. ತದನಂತರ ಜನರಿಗೆ ಸಹಾಯ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆಯೇ ಇಂದು (ಆಗಸ್ಟ್​ 18) ಹಿಮಾಚಲಕ್ಕೆ 11 ಕೋಟಿ ರೂ. ಹಣವನ್ನು ಘೋಷಣೆ ಮಾಡಿದ್ದಾರೆ.

ವಿಪತ್ತಿನ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿಗಾಗಿ ಹಿಮಾಚಲ ಪ್ರದೇಶ ಸರ್ಕಾರಕ್ಕೆ ಛತ್ತೀಸ್‌ಗಢದ ಜನರ ಪರವಾಗಿ 11 ಕೋಟಿ ರೂ. ಆರ್ಥಿಕ ನೆರವನ್ನು ಬಿಡುಗಡೆಗೊಳಿಸಿದ್ದೇವೆ ಎಂದು ಸಿಎಂ ಹೇಳಿದ್ದಾರೆ. ಭಾನುವಾರದಿಂದ ಹಿಮಾಚಲ ಪ್ರದೇಶದ ಗುಡ್ಡಗಾಡು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಶಿಮ್ಲಾ ಮತ್ತು ಇತರ ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿದೆ,(ಏಜೆನ್ಸೀಸ್).