ರಾಯ್ಪುರ್: ಛತ್ತೀಸ್ಗಢದಲ್ಲಿ ಶನಿವಾರ ನಕ್ಸಲ್ರ ವಿರುದ್ಧ ಕಾರ್ಯಾಚರಣೆ ನಡೆದಾಗಿನಿಂದ ಈವರೆಗೂ 21 ಸೈನಿಕರು ನಾಪತ್ತೆಯಾಗಿದ್ದಾರೆ. ಸುಕ್ಮಾ-ಬಿಜಾಪುರ್ ಗಡಿ ಭಾಗದಲ್ಲಿ ನಕ್ಸಲರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ.
24 ಸೈನಿಕರು ಗಾಯಗೊಂಡಿದ್ದು, ಅವರನ್ನು ಬಿಜಾಪುರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 7 ಮಂದಿಯನ್ನು ರಾಯ್ಪುರ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಶಿಫಾರಸು ಮಾಡಲಾಗಿದೆ.
ಭದ್ರತಾ ಸಿಬ್ಬಂದಿಯ ಸಾವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಖಂಡಿಸಿದ್ದಾರೆ. ಶಾಂತಿ ಮತ್ತು ಅಭಿವೃದ್ಧಿಯ ಶತ್ರುಗಳ ವಿರುದ್ಧ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ನಕ್ಸಲರಿಗೆ ಷಾ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಶನಿವಾರ ಪ್ರಧಾನಿ ನರೇಂದ್ರ ಮೋದಿಯು ಸಹ ಗಾಯಗೊಂಡ ಭದ್ರತಾ ಸಿಬ್ಬಂದಿಯ ಶೀಘ್ರ ಗುಣಮುಖರಾಗಲು ಹಾರೈಸಿದ್ದಾರೆ. ಅಲ್ಲದೆ, ಮಾವೋವಾದಿಗಳ ವಿರುದ್ಧದ ಹೋರಾಟದಲ್ಲಿ ಮಡಿದ ಯೋಧರ ಕುಟುಂಬದ ಜತೆ ನಾವಿರುತ್ತೇವೆಂದು ಟ್ವೀಟ್ ಮೂಲಕ ಧೈರ್ಯ ತುಂಬಿದ್ದಾರೆ.
ನಿನ್ನೆ ಬಿಜಾಫುರದ ಸಿಲಗರ್ ಅರಣ್ಯದಲ್ಲಿ ನಕ್ಸಲ್ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಮುಖಾಮುಖಿಯಾದ ಯೋಧರು ಹಾಗೂ ನಕ್ಸಲ್ರು ಭೀಕರ ಗುಂಡಿನ ಕಾಳಗ ನಡೆಸಿದ್ದಾರೆ. ನಿನ್ನೆಯಿಂದ 21 ಯೋಧರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. (ಏಜೆನ್ಸೀಸ್)