ನ್ಯೂಸ್

ಮುಂಬೈ ಆಯ್ತು ಈಗ ಚೆನ್ನೈ ಸರದಿ: ಪೊಲೀಸರಲ್ಲಿ ಹೆಚ್ಚುತ್ತಿದೆ ಸೋಂಕು ಪ್ರಕರಣ

ಚೆನ್ನೈ: ಮಹಾರಾಷ್ಟ್ರದಲ್ಲಿ ಈಗಾಗಲೇ 100ಕ್ಕೂ ಅಧಿಕ ಪೊಲೀಸರಿಗೆ ಕರೊನಾ ಸೋಂಕು ಪತ್ತೆಯಾಗಿ ಆತಂಕ ಮೂಡಿಸಿರುವ ಬೆನ್ನಲ್ಲೇ, ಇದೀಗ ತಮಿಳುನಾಡಿನ ಪೊಲೀಸರಲ್ಲಿಯೂ ಸೋಂಕು ಪತ್ತೆಯಾಗತೊಡಗಿದೆ.

ಇತ್ತೀಚೆಗಷ್ಟೇ ನಾಲ್ಕು ಮಂದಿ ಚೆನ್ನೈ ಪೊಲೀಸರಲ್ಲಿ ಕರೊನಾ ಸೋಂಕು ಪತ್ತೆಯಾಗಿದ್ದು ಅವರೀಗ ಚಿಕಿತ್ಸೆ ಪಡೆಯುತ್ತಿದ್ದಾರೆ. 29 ವರ್ಷದ ಹೋಂ ಗಾರ್ಡ್​ನಲ್ಲೂ ಸೋಂಕು ಪತ್ತೆಯಾಗಿದೆ. ಇಂದು ಮತ್ತೆ ಇಬ್ಬರು ಪೊಲೀಸರಲ್ಲಿ ಸೋಂಕು ಪತ್ತೆಯಾಗಿರುವ ಕಾರಣ, ಇಡೀ ಪೊಲೀಸ್​ ಸಮುದಾಯದಲ್ಲಿ ಆತಂಕ ಕಾಡತೊಡಗಿದೆ.

ಇಂದು ನುಂಗಮ್​ಬಕ್ಕಮ್​ ಠಾಣೆಯ ಇಬ್ಬರು ಪೊಲೀಸರಲ್ಲಿ ಸೋಂಕು ಪತ್ತೆಯಾಗಿದೆ. ಇವರು ಕುಟಂಬ ವರ್ಗದವನ್ನು ಈಗ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇತ್ತೀಚೆಗೆ ಕರೊನಾ ಸೋಂಕಿನಿಂದ ಮೃತಪಟ್ಟ ಬರಹಗಾರರೊಬ್ಬರ ಸಂಪರ್ಕಕ್ಕೆ ಒಬ್ಬ ಪೊಲೀಸ್​ ಬಂದಿರುವ ಹಿನ್ನೆಲೆಯಲ್ಲಿ, ಅವರಿಗೆ ಸೋಂಕು ತಗುಲಿರಬಹುದು ಎನ್ನಲಾಗಿದೆ. ಇದರಿಂದ ಸೋಂಕು ಠಾಣೆಯ ಇನ್ನೊಬ್ಬ ಪೊಲೀಸ್​ ಕಾನ್ಸ್​ಟೆಬಲ್​ಗೂ ಹರಡಿರುವ ಸಾಧ್ಯತೆ ಇದೆ.

ಈ ನಡುವೆ, ಮಹಾರಾಷ್ಟ್ರದ ಅನೇಕ ಪೊಲೀಸರಿಗೆ ಕರೊನಾ ಸೋಂಕು ಹರಡಿರುವ ಹಿನ್ನೆಲೆಯಲ್ಲಿ, ಪೊಲೀಸರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವ ಸರ್ಕಾರ, ಮುಂಬೈ ನಗರದಲ್ಲಿ ಕರ್ತವ್ಯದಲ್ಲಿ ಇರುವ ಎಲ್ಲಾ 55 ವರ್ಷ ಮೇಲ್ಪಟ್ಟ ಪೊಲೀಸರಿಗೆ ರಜೆಯ ಮೇಲೆ ತೆರಳುವಂತೆ ಸೂಚಿಸಿದೆ.

ಕರೊನಾ ಸೋಂಕಿಗೆ ಬಾಧಿತರಾಗಿರುವ ಪೊಲೀಸರು ಎಲ್ಲರೂ 50 ವರ್ಷ ಮೇಲ್ಪಟ್ಟವರಾದವರಿಂದ ಈ ನಿರ್ಧಾರ ತಳೆಯಲಾಗಿದೆ. ಇದರ ಜತೆಗೆ 53 ವರ್ಷ ಮೇಲ್ಪಟ್ಟ ಪೊಲೀಸರಿಗೆ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದರೆ ಅವರೂ ರಜೆ ಪಡೆಯುವಂತೆ ಸರ್ಕಾರ ಸೂಚಿಸಿದೆ.

ಮಹಾರಾಷ್ಟ್ರದ ಪೊಲೀಸರಿಗೆ ಕರೊನಾ ಪರೀಕ್ಷೆ ಮಾಡಿಸಿದಾಗ ನೂರಕ್ಕೂ ಅಧಿಕ ಪೊಲೀಸರಿಗೆ ಕರೊನಾ ವೈರಸ್​ ಇರುವುದು ದೃಢಪಟ್ಟಿದೆ. ಅವರ ಪೈಕಿ 20 ಮಂದಿ ಪೊಲೀಸ್​ ಅಧಿಕಾರಿಗಳಾಗಿದ್ದಾರೆ. 56 ವರ್ಷದ ಪೊಲೀಸ್​ ಹೆಡ್​ ಕಾನ್ಸ್​ಟೆಬಲ್​ ಸೇರಿದಂತೆ ಮೂರು ಪೊಲೀಸರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಅಷ್ಟೇ ಅಲ್ಲದೇ, ಕರೊನಾ ಸೋಂಕಿಗೆ ಇಲ್ಲಿಯವರೆಗೆ ಬಲಿಯಾದವರ ಲೆಕ್ಕಾಚಾರ ಹಾಕಿದರೆ 55 ವರ್ಷಕ್ಕಿಂತ ಹೆಚ್ಚಿನವರೇ ಇದ್ದಾರೆ. ಪೊಲೀಸರು ಅನೇಕ ರೀತಿಯಲ್ಲಿ ಸೋಂಕಿತರ ಸಂಪರ್ಕಕ್ಕೆ ಬರುವ ಹಿನ್ನೆಲೆಯಲ್ಲಿ ಅವರಿಗೆ ಸೋಂಕು ಬಲುಬೇಗನೆ ತಗಲುವ ಸಾಧ್ಯತೆ ಇದೆ. (ಏಜೆನ್ಸೀಸ್​)