ನವದೆಹಲಿ: ಚೆನ್ನೈನಲ್ಲಿ ಈಶಾನ್ಯ ಮಾನ್ಸೂನ್ ಶುರುವಾಗಿದ್ದು, ಇಂದು ಬೆಳಗ್ಗೆಯಿಂದ ಮಳೆ ಆರ್ಭಟಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ಒಂದು ದಿನದಲ್ಲಿ ಇಷ್ಟು ಪ್ರಮಾಣದ ಮಳೆ ಆಗಿರಲಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗುಡುಗುಸಹಿತ ನಿರಂತರ ಮಳೆ ಇನ್ನೂ ಎರಡು-ಮೂರು ಘಂಟೆಗಳು ಮುಂದುವರಿಯಲಿದೆ ಎಂದು ವರದಿ ನೀಡಿದೆ.
ಚೆನ್ನೈ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದ್ದು, ಫೇಸ್ ಮಾಸ್ಕ್, ಕೈಗವಸುಗಳೆಲ್ಲ ನೀರಿನಲ್ಲಿ ತೇಲಿ ಬರುತ್ತಿರುವ ವಿಡಿಯೋ, ಫೋಟೋಗಳು ವೈರಲ್ ಆಗಿವೆ. ನುಂಗಂಬಕ್ಕಂ ಪ್ರದೇಶದಲ್ಲಿ ಬೆಳಿಗ್ಗೆ 8: 30ರವರೆಗೆ 133.4 ಮಿ.ಮೀ ಮಳೆಯಾಗಿದ್ದರೆ, ಮೀನಾಂಬಕ್ಕಮ್ನಲ್ಲಿ 53.8ಎಂಎಂ ಮಳೆ ಬಿದ್ದಿದೆ. ಒಂದೇ ದಿನದಲ್ಲಿ ಇಷ್ಟು ಪ್ರಮಾಣದ ಮಳೆ ಕಳೆದ 5 ವರ್ಷಗಳಲ್ಲಿ ಬಿದ್ದಿರಲಿಲ್ಲ. 2014ರಲ್ಲಿ ಒಂದು ದಿನ 161.9ಮಿಮೀ ಮಳೆಯಾಗಿತ್ತು. ಇದನ್ನೂ ಓದಿ: ಡಬ್ಬಿಂಗ್ ಮುಗಿಸಿದ ‘ಅರ್ಜುನ್ ಗೌಡ’ … ಬಿಡುಗಡೆ ಯಾವಾಗ?
ಗ್ರೇಟರ್ ಚೆನ್ನೈ ಕಾರ್ಪೋರೇಶನ್ ಸಹಾಯವಾಣಿ ತೆರೆದು, ಫೋನ್ನಂಬರ್ಗಳನ್ನು ಸಾರ್ವಜನಿಕರಿಗೆ ಒದಗಿಸಿದೆ. ಮಳೆಯಿಂದ ಆಗುವ ಅನಾಹುತ ಎದುರಿಸಲು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನೂ ವಹಿಸಲಾಗಿದೆ. (ಏಜೆನ್ಸೀಸ್)