ನ್ಯೂಸ್

ಸಮವಸ್ತ್ರ ಧರಿಸಿ, ಎಂಜಾಯ್​ ಎಂಜಾಮಿ ಹಾಡಿಗೆ ಹೆಜ್ಜೆ ಹಾಕಿದ ಮಹಿಳಾ ಪೊಲೀಸರು

ಚೆನ್ನೈ: ಕರೊನಾ ಪೂರ್ತಿ ದೇಶವನ್ನೇ ಆವರಿಸಿಬಿಟ್ಟಿದೆ. ಕರೊನಾದ ಈ ಸಮಯದಲ್ಲಿ ಆತಂಕ, ಭಯಗಳಿಗೆ ಆಸ್ಪದ ಕೊಡದೆ, ಸೂಕ್ತ ಸುರಕ್ಷತೆ ವಹಿಸುವುದು ಅತ್ಯಗತ್ಯ. ಈ ಸಂಬಂಧ ಜನರಿಗೆ ಅರಿವು ಮೂಡಿಸಲೆಂದು ಚೆನ್ನೈನ ರೈಲ್ವೆ ನಿಲ್ದಾಣದ ಮಹಿಳಾ ಪೊಲೀಸರು ಬೇರೆಯದ್ದೇ ಮಾರ್ಗವನ್ನು ಕಂಡುಕೊಂಡಿದ್ದಾರೆ. ಆ ಮಾರ್ಗ ಜನರಿಗೆ ಇಷ್ಟವಾಗಿದೆ ಕೂಡ.

ಒಂದು ಮೈಕ್​ ಹಿಡಿದುಕೊಂಡು, "ಕರೊನಾ ಕೊಲ್ಲಲು ಹೀಗೆ ಮಾಡಿ, ಹೀಗೆ ಮಾಡಬೇಡಿ" ಎಂದು ಹೇಳಿದರೆ ಎಷ್ಟು ಜನ ಕೇಳುತ್ತಾರೆ? ಅದೇ ಹಾಡು ಹೇಳಿಯೋ, ನೃತ್ಯ ಮಾಡಿಯೋ ಒಟ್ಟಿನಲ್ಲಿ ವಿಶೇಷ ರೀತಿಯಲ್ಲಿ ಹೇಳಿದರೆ ಅದು ಸ್ವಲ್ಪ ಮಟ್ಟಿಗಾದರೂ ತಲೆಯೊಳಗೆ ಹೋಗುತ್ತದೆ. ಅದೇ ಕಾರಣಕ್ಕೆ ಚೆನ್ನೈ ರೈಲ್ವೆ ನಿಲ್ದಾಣದ ಮಹಿಳಾ ಪೊಲೀಸರೂ ಹೆಜ್ಜೆ ಹಾಕುವ ಪ್ರಯತ್ನ ಮಾಡಿದ್ದಾರೆ.

ರೈಲ್ವೆ ನಿಲ್ದಾಣದಲ್ಲಿದ್ದ ಪ್ರಯಾಣಿಕರ ಗಮನವನ್ನು ಟ್ರೆಂಡಿಂಗ್​ನಲ್ಲಿರುವ ಎಂಜಾಯ್​ ಎಂಜಾಮಿ ಹಾಡಿಗೆ ಹೆಜ್ಜೆ ಹಾಕುವ ಸೆಳೆದಿದ್ದಾರೆ. ನಂತರ ಸೋಂಕು ನಿಯಂತ್ರಣಕ್ಕೆ ಏನು ಮಾಡಬೇಕೆಂಬ ಮಾಹಿತಿಯನ್ನು ಹಂಚಿದ್ದಾರೆ. ಸಮವಸ್ತ್ರ ಧರಿಸಿ, ಕೈಗೆ ಗ್ಲೌಸ್​ ಮತ್ತು ಮುಖಕ್ಕೆ ಮಾಸ್ಕ್​ ತೊಟ್ಟಿದ್ದ ಮಹಿಳಾ ಪೊಲೀಸರ ಈ ಪ್ರಯತ್ನಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಆ ಡ್ಯಾನ್ಸ್​ನ ವಿಡಿಯೋ ವೈರಲ್​ ಆಗಿದೆ. (ಏಜೆನ್ಸೀಸ್)