ನ್ಯೂಸ್

13 ವರ್ಷದ ಬಾಲಕಿ ಮೇಲೆರಗಿದ ಇನ್ಸ್​ಪೆಕ್ಟರ್ ಬಂಧನ​: ತಾಯಿ ಮುಂದೆ ಪೋಲಿಸಪ್ಪನ ಕ್ರೌರ್ಯ ಬಿಚ್ಚಿಟ್ಟ ಅಪ್ರಾಪ್ತೆ!

ಚೆನ್ನೈ: ಹದಿಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ಚೆನ್ನೈ ಪೊಲೀಸ್​ ಇನ್ಸ್​ಪೆಕ್ಟರ್​ನನ್ನು ಸೋಮವಾರ ಬಂಧಿಸಲಾಗಿದೆ. ​

ಸಿ. ಪುಗಲೆಂಧಿ ಬಂಧಿತ ಇನ್ಸ್​ಪೆಕ್ಟರ್​. ವೇಶ್ಯಾವಾಟಿಕೆ ಜಾಲದಲ್ಲಿ ಬಂಧಿಯಾಗಿದ್ದ ಮಹಿಳೆಯೊಬ್ಬಳು ನೀಡಿದ ದೂರಿನ ಅನ್ವಯ ಇನ್ಸ್​ಪೆಕ್ಟರ್​ನನ್ನು ಬಂಧಿಸಲಾಗಿದೆ. ಚೆನ್ನೈನಲ್ಲಿರುವ ಚಿಕ್ಕಮ್ಮ ಸುನಿತಾ ಬಾನು ಮನೆಯಲ್ಲಿ ಬಾಲಕಿ ವಾಸವಿದ್ದಳು. ಈ ವೇಳೆ ಆಕೆಯನ್ನು ಬಲವಂತವಾಗಿ ಜಾಲಕ್ಕೆ ನೂಕಲಾಗಿದೆ. ಸದ್ಯ ರಕ್ಷಣೆಯಾಗಿರುವ ಬಾಲಕಿ ನಡೆದ ಎಲ್ಲ ಘಟನೆಯನ್ನು ಎರಡು ತಿಂಗಳ ಬಳಿಕ ಸುನಿತಾ ಬಾನು ಮನೆಗೆ ಭೇಟಿ ನೀಡಿದ ತಾಯಿಯ ಮುಂದೆ ತೆರೆದಿಟ್ಟಾಗ ಪ್ರಕರಣ ಬೆಳಕಿಗೆ ಬಂದಿದೆ.

ಮಗಳ ನೋವಿನ ಕತೆ ಕೇಳಿದ ತಾಯಿ ಚೆನ್ನೈನ ವಾಸರ್​ಮನ್​ಪೇಟೆಯಲ್ಲಿರುವ ಮಹಿಳಾ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ಮದನ್​ ಕುಮಾರ್​, ಆತನ ಪತ್ನಿ ಸುನಿತಾ ಬಾನು, ತಾಯಿ ಸೆಲ್ವಿ ಸೇರಿದಂತೆ ಮಹೇಶ್ವರಿ, ಸಂಧ್ಯಾ, ವಿಜಯ, ಕಾರ್ತಿಕ್​ ಮತ್ತು ವನಿತಾ ಎಂಬುವರು ಬಂಧಿಸಿದ್ದಾರೆ.

ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಆರೋಪಿ ಸಂಧ್ಯಾ, ಬಾಲಕಿಯನ್ನು ರಾಜೇಂದ್ರನ್​ (44) ಎಂಬ ಗ್ರಾಹಕನ ಬಳಿ ಕಳುಹಿಸಿದ್ದೆ. ಅದೇ ಸಮಯದಲ್ಲಿ ಬಾಲಕಿಯನ್ನು ಭೇಟಿ ಮಾಡಿದ್ದ ಪುಗಲೆಂದಿ ಆಕೆಯ ಮೇಲೆ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆಂದು ಸಂಧ್ಯಾ ಆರೋಪಿಸಿದ್ದಾಳೆ. ಆತಂಕಕಾರಿ ವಿಚಾರವೆಂದರೆ, ವೇಶ್ಯಾವಾಟಿಕೆ ಜಾಲಕ್ಕೆ ನೂಕುವ ಮುನ್ನ ಬಾಲಕಿ ಮೇಲೆ ಮದನ್​ ಕುಮಾರ್​ ಸಹ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ.

ಸಂತ್ರಸ್ತ ಬಾಲಕಿಯ ಸಹಾಯ ಪಡೆದು ಆರೋಪಿ ರಾಜೇಂದ್ರನ್​ನನ್ನು ಸಹ ಬಂಧಿಸಲಾಗಿದ್ದು, ಪೊಕ್ಸೊ ಕಾಯ್ದೆಯಡಿ ರಾಜೇಂದ್ರನ್​ ಮತ್ತು ಪುಗಲೆಂಧಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಪರಾಧ ಬಗ್ಗೆ ಪ್ರಕರಣ ಮುಚ್ಚಿಹಾಕಲು ಇನ್ಸ್​ಪೆಕ್ಟರ್​ ಪುಗಲೆಂಧಿ ಲಂಚದ ರೂಪವಾಗಿ ಬಾಲಕಿಯನ್ನು ನಿರಂತರವಾಗಿ ಬಳಸಿಕೊಂಡಿದ್ದಾನೆಂದು ರಾಜೇಂದ್ರನ್​ ತಿಳಿಸಿದ್ದಾನೆ. ಇದೇ ಜಾಲದಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಮತ್ತು ಗ್ರಾಹಕರ ಮನವೊಲಿಸುತ್ತಿದ್ದ 6 ಮಂದಿಯನ್ನು ಬಂಧಿಸಲಾಗಿದ್ದು, ವೇಶ್ಯಾವಾಟಿಕೆ ಜಾಲದ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ​

ಪುಗಲೆಂಧಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಜೈಲಿಗೆ ರವಾನಿಸಲಾಗಿದೆ. ಪುಗಲೆಂಧಿ ವಿರುದ್ಧ ಅನೇಕ ಆರೋಪಗಳು ಕೇಳಿಬಂದಿರುವುದಿಂದ ಆತನನ್ನು ಕರ್ತವ್ಯದಿಂದ ಅಮಾನತ್ತು ಮಾಡಲಾಗಿದೆ. (ಏಜೆನ್ಸೀಸ್​)