ನ್ಯೂಸ್

ಪ್ರಿಯಕರನಿಗಾಗಿ ಮನೆ ಬಿಟ್ಟು ಬಂದ ಅಪ್ರಾಪ್ತೆ: ರಕ್ಷಿಸಬೇಕಾದ ಪೊಲೀಸ್​ ಪೇದೆಯಿಂದಲೇ ಅಸಹ್ಯ ಕೃತ್ಯ! Chennai Cop

Chennai Cop : ತನ್ನ ಪ್ರಿಯಕರನನ್ನು ಹುಡುಕಿಕೊಂಡು ಮನೆ ಬಿಟ್ಟು ಬಂದ 13 ವರ್ಷದ ಬಾಲಕಿಯ ಮೇಲೆ ಸಂಚಾರಿ ಪೊಲೀಸ್​ ಪೇದೆಯೊಬ್ಬ​ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆಕೆಯನ್ನು ರಕ್ಷಿಸಬೇಕಾದ ಪೊಲೀಸ್​ನಿಂದಲೇ ಆಕೆಯ ಜೀವನ ಹಾಳಾಗಿರುವ ಭಯಾನಕ ಘಟನೆ ಇತ್ತೀಚೆಗೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದಿದೆ.

ಆರೋಪಿ ಪೊಲೀಸ್​ ರಾಮನ್​ ಎಂಬುವರನ್ನು ಬಂಧಿಸಲಾಗಿದೆ. ಅಲ್ಲದೆ, ಮದುವೆಯಾಗುವ ನೆಪದಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆಕೆ ಬಹಿರಂಗಪಡಿಸಿದ ನಂತರ, ಪೊಲೀಸರು 16 ವರ್ಷದ ಹುಡುಗನನ್ನು ಸಹ ಬಂಧಿಸಿದ್ದಾರೆ.

ಏನಿದು ಘಟನೆ?

ಜನವರಿ 25ರಂದು ಸಂತ್ರಸ್ತೆಯ ತಾಯಿ ಮೈಲಾಪುರ ಮಹಿಳಾ ಪೊಲೀಸ್​ ಠಾಣೆಯಲ್ಲಿ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಬಾಲಕಿ ತನ್ನ ಬಾಯ್​ಫ್ರೆಂಡ್​ ಜತೆ ಇರುವುದನ್ನು ಪತ್ತೆಹಚ್ಚಿದರು. ಬಳಿಕ ಇಬ್ಬರನ್ನು ವಶಕ್ಕೆ ಪಡೆದರು. ಹುಡುಗಿಯನ್ನು ವಿಚಾರಣೆ ನಡೆಸಿದಾಗ ಆಕೆ ನಡೆದ ಘಟನೆಯನ್ನು ವಿವರಿಸಿದ್ದಾಳೆ.

ಸಂತ್ರಸ್ತೆಯ ಹೇಳಿಕೆ ಪ್ರಕಾರ. ಮದುವೆಯಾಗುವುದಾಗಿ ಭರವಸೆ ನೀಡಿದ ಪ್ರಿಯಕರನ ಮಾತುಗಳನ್ನು ನಂಬಿ, ಜ.25ರಂದು ಆ ಹುಡುಗಿ ಮನೆಯಿಂದ ಓಡಿಹೋಗಿದ್ದಾಳೆ. ರಾತ್ರಿಯಾಗಿದ್ದರಿಂದ ರಸ್ತೆಬದಿಯ ಫುಟ್‌ಪಾತ್‌ನಲ್ಲಿ ಆಕೆ ನಿದ್ರೆಗೆ ಜಾರಿದಳು. ಅಷ್ಟರಲ್ಲಿ ಅಲ್ಲಿಗೆ ಬಂದ ಸಂಚಾರಿ ಪೊಲೀಸ್ ರಾಮನ್, ಸಹಾಯ ಮಾಡುವುದಾಗಿ ಭರವಸೆ ನೀಡಿ ಹುಡುಗಿಯನ್ನು ತನ್ನ ಜೀಪಿನಲ್ಲಿ ಕರೆದೊಯ್ದನು. ಆದರೆ, ಆತ ವಾಹನದಲ್ಲಿಯೇ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದನು. ಅಲ್ಲಿಂದ ಸಂಚಾರಿ ಪೊಲೀಸ್ ಬೂತ್‌ಗೆ ಕರೆದೊಯ್ದು ಮತ್ತೊಮ್ಮೆ ಲೈಂಗಿಕ ದೌರ್ಜನ್ಯ ಎಸಗಿದನು. ಹುಡುಗಿ ಹೇಗೋ ರಾಮನ್‌ನಿಂದ ತಪ್ಪಿಸಿಕೊಂಡಳು.

ಇದಾದ ನಂತರ, ಸಂತ್ರಸ್ತೆ ಮನೆಗೆ ಮರಳಿದಳು. ಆದರೆ, ಅವಳ ತಾಯಿ ಅವಳನ್ನು ಬೇರೆಯವನೊಂದಿಗೆ ಮದುವೆ ಮಾಡಿಸುತ್ತಾರೆ ಎಂದು ಅನುಮಾನಿಸಿ, ಆಕೆ ಎರಡನೇ ಬಾರಿಗೆ ಮನೆ ಬಿಟ್ಟು ಓಡಿಹೋದಳು. ಆ ಹುಡುಗಿ ಮತ್ತು ಹುಡುಗ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದರು. ಇದಾದ ನಂತರ ಪೊಲೀಸರು ಇಬ್ಬರನ್ನು ಪತ್ತೆ ಮಾಡಿದರು. ಮದುವೆಯ ನೆಪದಲ್ಲಿ ಆ ಹುಡುಗನು ಕೂಡ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ಆಕೆ ಒಪ್ಪಿಕೊಂಡ ಬಳಿಕ ಆ ಹುಡುಗನನ್ನು ಪೊಲೀಸರು ಬಂಧಿಸಿದ್ದಾರೆ.

ಇದೀಗ ಪೊಲೀಸರು ಸಂಚಾರಿ ಪೇದೆ ರಾಮನ್, ಆಕೆಯ ಗೆಳೆಯ ಮತ್ತು ಆತನ ತಾಯಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಮಗಳಿಗೆ ಬಾಲ್ಯ ವಿವಾಹ ಮಾಡಲು ಮುಂದಾದ ಕಾರಣ ತಾಯಿಯ ವಿರುದ್ಧವೂ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)